2020 ಮುಗಿದು 2021ನೇ ವರ್ಷಕ್ಕೆ ಕಾಲಿಟ್ರು ಸ್ಯಾಂಡಲ್ ವುಡ್ ನಲ್ಲಿ ಕೊರೊನಾದ ಕರಿ ಛಾಯೆ ಹಾಗೇ ಅವರಿಸಿದೆ. ಆದರೆ ಈ ವರ್ಷದಲ್ಲಿ ಕನ್ನಡ ಚಿತ್ರರಂಗ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ಪುನೀತ್ ರಾಜ್‍ಕುಮಾರ್, ಸುದೀಪ್, ಧ್ರುವ ಸರ್ಜಾ, ದರ್ಶನ್ ಹಾಗೂ ದುನಿಯಾ ವಿಜಯ್ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿರೋದು.
ಹೌದು, ಒಂದೊಳ್ಳೆ ದಿನಕ್ಕಾಗಿ ಕಾದಿದ್ದ ಸ್ಟಾರ್ಗಳು ಮನರಂಜಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮತ್ತೊಂದು ಕಡೆ ಯಾವಾಗ ನಮ್ಮ ನೆಚ್ಚಿನ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತೆ ಅಂತಾ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸ್ಟಾರ್ ನಟರು ಭರಪೂರ ಮನರಂಜನೆ ಕೊಡೋದಿಕ್ಕೆ ಸಜ್ಜಾಗಿದ್ದಾರೆ.
ಏಪ್ರಿಲ್ ತಿಂಗಳು ಸ್ಯಾಂಡಲ್ವುಡ್ಗೆ ಅದೃಷ್ಟದ ತಿಂಗಳಾಗೋದ್ರಲ್ಲಿ ಡೌಟೇ ಇಲ್ಲ. ಯಾಕೆಂದರೆ ಬಿಗ್ ಬಜೆಟ್ ಚಿತ್ರಗಳಾದ ಯುವರತ್ನ, ರಾಬರ್ಟ್, ಕೋಟಿಗೊಬ್ಬ 3 ಹಾಗೂ ಸಲಗ ರಿಲೀಸ್ಗೆ ಸಿದ್ದವಾಗಿವೆ. ಈ ಸಾಲಿನಲ್ಲಿ ಮೊದಲನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ, ಬಹು ನಿರೀಕ್ಷೆಯ ಯುವರತ್ನ ಚಿತ್ರ ಏಪ್ರಿಲ್ 1ಕ್ಕೆ ಅಂದರೆ, ಗುರು ರಾಯರ ದಿನ ಗುರುವಾರದಂದು ಎರಡು ಭಾಷೆಗಳಲ್ಲಿ ರಿಲೀಸ್ ಆಗಲು ಮುಹೂರ್ತ ಫಿಕ್ಸ್ ಆಗಿದೆ.
ನಿರ್ದೇಶಕ ಸಂತೋಷ್ ಆನಂದ್ ನಿರ್ದೇಶನದ ಯುವರತ್ನ ಸಿನಿಮಾದಲ್ಲಿ, ಅಪ್ಪು ಕಂಗೊಳಿಸಲಿದ್ದಾರೆ. ಈಗಾಗಲೇ ಟೀಸರ್ ಮತ್ತು ಎರಡು ಹಾಡುಗಳಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ಟೌನ್ ಆಗಿರುವ ಯುವರತ್ನ ಚಿತ್ರವನ್ನ, ಏಪ್ರಿಲ್ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ವಿಜಯ್ ಕಿರಂಗದೂರ್ ತೀರ್ಮಾನಿಸಿದ್ದಾರೆ.
ಪವರ್ ಸ್ಟಾರ್ ಚಿತ್ರದ ಬಳಿಕ, ಥಿಯೇಟರ್ಗೆ ಲಗ್ಗೆ ಇಡೋದಿಕ್ಕೆ ರೆಡಿಯಾಗಿರೋ ಚಿತ್ರ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್, ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲೇ ಶೂಟಿಂಗ್ ಮುಗಿಸಿ ಏಪ್ರಿಲ್ ಯುಗಾದಿ ಹಬ್ಬಕ್ಕೆ ರಿಲೀಸ್ಗೆ ಪ್ಲಾನ್ ಮಾಡಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಲಾಕ್ ಡೌನ್ ನಂತರ ಒಂದೊಳ್ಳೆ ಸಿನಿ ವಾತಾವರಣಕ್ಕಾಗಿ ಕಾದಿದ್ದ ರಾಬರ್ಟ್ ಈಗ ರಿಲೀಸ್ಗೆ ಸಿದ್ಧವಾಗಿದೆ.
ಶೇ 100ರಷ್ಟು ಥಿಯೇಟರ್ ಭರ್ತಿಗಾಗಿ ಕಾಯುತ್ತಿದ್ದ ರಾಬರ್ಟ್ ಬಳಗ ಏಪ್ರಿಲ್ ಎರಡನೇ ತಾರೀಖಿನ ಗುಡ್ ಫ್ರೈಡೇ ಮೇಲೆ ಗುರಿ ಇಟ್ಟಿತ್ತು. ಆದ್ರೆ ಯುವರತ್ನನ ಆಗಮನದಿಂದ ರಾಬರ್ಟ್ ಅನ್ನು ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ಥಿಯೇಟರ್ಗೆ ತರೋ ಪ್ಲಾನ್ನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇದ್ದಾರೆ. ಯಾವುದೇ ಕನ್ನಡ ಸಿನಿಮಾದ ಡೇಟ್ಗೆ ಕ್ಲಾಶ್ ಆಗದಂತೆ ಏಪ್ರಿಲ್ 16 ರಂದು ಕನ್ನಡ ಚಿತ್ರಮಂದಿರಗಳ ಸ್ಕ್ರೀನ್ಗಳಲ್ಲಿ ರಾಬರ್ಟ್ ಅಬ್ಬರಿಸಲಿದ್ದಾನೆ.
ರಾಬರ್ಟ್ ಸಿನಿಮಾದ ನಂತರ ಥಿಯೇಟರ್ನಲ್ಲಿ ಆರ್ಭಟಿಸೋಕೆ ರೆಡಿಯಾಗಿದೆ ಕಿಚ್ಚ ಸುದೀಪ್ ಅಭಿನಯದ ನಿರೀಕ್ಷೆಯ ಚಿತ್ರ ಕೋಟಿಗೊಬ್ಬ-3. ಇಂಟರ್ ನ್ಯಾಷನಲ್ ಖಿಲಾಡಿಯಾಗಿ ಸುದೀಪ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟೀಸರ್ಗಳು ಮತ್ತು ಹಾಡುಗಳಿಂದ ಹವಾ ಸೃಷ್ಟಿಸಿರೋ ಕೋಟಿಗೊಬ್ಬ-3, ಸೂರಪ್ಪ ಬಾಬು ನಿರ್ಮಾಣದಲ್ಲಿ, ಶಿವ ಕಾರ್ತಿಕ್ ನಿರ್ದೇಶನ ಈ ಚಿತ್ರಕ್ಕಿದೆ. ಕೋಟಿಗೊಬ್ಬ-3 ಸಿನಿಮಾ ಸಿದ್ಧವಾಗಿ ಹತ್ತ್ ಹತ್ರಾ ಒಂದು ವರ್ಷ ಆಯ್ತು, ಆದ್ರೆ ಕೊರೊನಾ ಲಾಕ್ಡೌನ್ನ ಅಡೆ ತಡೆಗಳಿಂದ ಕೋಟಿಗೊಬ್ಬ-3 ತೆರೆ ಕಾಣೋದು ತಡವಾಯ್ತು. ಅಂತೂ ಇಂತು ಸೂಕ್ತ ಸಂದರ್ಭಕ್ಕಾಗಿ ಕಾದಿದ್ದ ಕೋಟಿಗೊಬ್ಬ ಟೀಮ್ ಈಗ ರಿಲೀಸ್ಗೆ ಸಿದ್ಧವಾಗಿ, ಏಪ್ರಿಲ್ 23 ರಂದು ಪ್ರೇಕ್ಷಕರಿಗೆ ದರ್ಶನ ಕೊಡೋದಿಕ್ಕೆ ಡೇಟ್ ಫಿಕ್ಸ್ ಆಗಿದೆ.
ಕೋಟಿಗೊಬ್ಬ 3 ಸಿನಿಮಾದ ಬಳಿಕ, ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿರುವ ಚಿತ್ರ ಸಲಗ. ದುನಿಯಾ ವಿಜಯ್ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿ ಅಭಿನಯಿಸಿರೋ ಚಿತ್ರ. ಸದ್ಯ ಸಲಗ ಚಿತ್ರದ ಟೀಸರ್ ಹಾಗೂ ಹಾಡುಗಳಿಂದಲೇ ಚಂದವ ವನದಲ್ಲಿ ಸದ್ದು ಮಾಡುತ್ತಿರೋ ಚಿತ್ರ ಮಾರ್ಚ್ ತಿಂಗಳಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡುವ ಸಾಧ್ಯತೆ ಇದೆ.
ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಚಿತ್ರಮಂದಿರಗಳ ಪರಿಸ್ಥಿತಿ ನೋಡಿಕೊಂಡು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ರಿಲೀಸ್ ಮಾಡುವ ಯೋಚನೆಯಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿಂದ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿವೆ.