ನವರಸನಾಯಕ ಜಗ್ಗೇಶ್ ಅಭಿನಯದ ಗುರುಪ್ರಸಾದ್ ನಿರ್ದೇಶಿಸುತ್ತಿರುವ ರಂಗನಾಯಕ ಚಿತ್ರ ನಿರೀಕ್ಷೆ ಹುಟ್ಟಿಸಿದೆ. 2019ರಲ್ಲೇ ಕಲಾವಿದರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುರುಪ್ರಸಾದ್ ಮತ್ತು ಜಗ್ಗೇಶ್ ಕೈಕೈಹಿಡಿದು, ತಾವಿಬ್ಬರೂ ಹಳೆಯ ಜಗಳಗಳನ್ನು ಮರೆತು, ಹೊಸದಾಗಿ ಚಿತ್ರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
2019ರ ಕೊನೆಗೆ ಚಿತ್ರವನ್ನು ಪ್ರಾರಂಭಿಸುವುದಾಗಿಯೂ ಹೇಳಿದ್ದರು. ಆದರೆ ಕೊರೊನಾ ಲಾಕ್ಡೌನ್ನಿಂದಾಗಿ ಚಿತ್ರ ಸೆಟ್ಟೇರಿರಲಿಲ್ಲ. ಇದೀಗ ಚಿತ್ರೀಕರಣ ಆರಂಭಗೊಂಡಿದೆ. ಚಿತ್ರೀಕರಣದಲ್ಲಿ ನಟ ಜಗ್ಗೇಶ್ ಭಾಗಿಯಾಗಿದ್ದು, ರಂಗನಾಯಕ ಸೆಟ್ಗೆ ಎಂಟ್ರಿ ಕೊಡುತ್ತಿರುವ ಫೋಟೋವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.
ಈ ಚಿತ್ರಕ್ಕಾಗಿ ವಿಶೇಷ ಸೆಟ್ ನಿರ್ಮಿಸಲಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲೇ ನಡೆಯುತ್ತಿದೆ. ಚಿತ್ರ ವಿಳಂಬವಾಗುವುದಕ್ಕೆ ಅದೂ ಸಹ ಒಂದು ಕಾರಣವಾಗಿತ್ತು. ಇದೀಗ ಸೆಟ್ ಸಂಪೂರ್ಣಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಅಲ್ಲೇ ಸತತ ಚಿತ್ರೀಕರಣ ನಡೆಯಲಿದೆ. ಈಗಾಗಲೇ ‘ಬಾಡಿ ಗಾಡ್’ ಸೇರಿ ಇತರೆ ಚಿತ್ರಗಳನ್ನು ಮುಗಿಸಿರುವ ಗುರುಪ್ರಸಾದ್, ಹೊಸ ಉತ್ಸಾಹದಿಂದ ಈ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ.
ಈ ಹಿಂದೆ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ನಲ್ಲಿ ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರಗಳು ಬಿಡುಗಡೆಯಾಗಿದ್ದವು. ಆ ಚಿತ್ರದ ಯಶಸ್ಸಿನ ವಿಚಾರದಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದೀಗ ಮತ್ತ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ರಂಗನಾಯಕ ಚಿತ್ರವನ್ನು ವಿಖ್ಯಾತ್ ಚಿತ್ರ ಬ್ಯಾನರ್ನಡಿ ನಿರ್ಮಿಸುತ್ತಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ನಿರ್ದೇಶನದ ಜೊತೆ ಗುರು ಪ್ರಸಾದ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.