2016 ರಲ್ಲಿ ತೆರೆಕಂಡಿದ್ದ 'ಸಿಪಾಯಿ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನವನಟ ಸಿದ್ಧಾರ್ಥ್ ಮಹೇಶ್ ಈಗ ಮತ್ತೆ ಸ್ಯಾಂಡಲ್ವುಡ್ನಲ್ಲಿ 'ಗರುಡ' ನಾಗಿ ಹಾರಾಡಲು ರೆಡಿಯಾಗಿದ್ದಾರೆ. ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಮಲ್ಲೇಶ್ವರಂನ ಎಸ್ಆರ್ವಿ ಥಿಯೇಟರ್ನಲ್ಲಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗವಹಿಸಿತ್ತು.
'ಗರುಡ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ - ರಂಗಾಯಣ ರಘು
ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಧನು ಕುಮಾರ್ 'ಗರುಡ' ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿದ್ಧಾರ್ಥ್ ಮಹೇಶ್, ಐಂದ್ರಿತಾ ರೈ, ಶ್ರೀನಗರ ಕಿಟ್ಟಿ, ಆಶಿಕಾ ರಂಗನಾಥ್, ರಂಗಾಯಣ ರಘು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.
'ಗರುಡ' ಚಿತ್ರ ಸೆಟ್ಟೇರಿ ಬರೋಬ್ಬರಿ ಎರಡೂವರೆ ವರ್ಷಗಳು ಕಳೆದಿದ್ದು ಹಲವಾರು ಅಡಚಣೆಗಳನ್ನು ಮೆಟ್ಟಿನಿಂತು ಚಿತ್ರತಂಡ ಇಂದು ಕೊನೆಗೂ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ವಿಶೇಷ ಎಂದರೆ 'ಗರುಡ' ಚಿತ್ರದಲ್ಲಿ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮೊದಲ ಬಾರಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದು, ಅವರ ಪಾತ್ರ ರೋಚಕವಾಗಿರುವುದು ಟ್ರೇಲರ್ನಲ್ಲಿ ಎದ್ದು ಕಾಣುತ್ತದೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಇತರ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ನಾನು ಬಹಳ ವಿಭಿನ್ನವಾಗಿ ಕಾಣಿಸಿದ್ದೇನೆ. ಇದು ಪಕ್ಕಾ ಕಮರ್ಷಿಯಲ್ ಪಾತ್ರ ಎಂದು ಶ್ರೀನಗರ ಕಿಟ್ಟಿ ಹೇಳಿದರು. ನಾಯಕಿಯರಾಗಿ ಆಶಿಕಾ ರಂಗನಾಥ್ ಹಾಗೂ ನಟಿ ಐಂದ್ರಿತಾ ರೈ ಅಭಿನಯಿಸಿದ್ದು ಇಬ್ಬರದ್ದು ಬಹಳ ಪ್ರಮುಖ ಪಾತ್ರವಾಗಿದೆ. ಚಿತ್ರದ ನಾಯಕ ಸಿದ್ದಾರ್ಥ್ ಮಾತನಾಡಿ 'ಗರುಡ' ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಇದು ನನಗೆ ಬಹಳ ವಿಶೇಷವಾದ ಸಿನಿಮಾ. ಏಕೆಂದರೆ ನನ್ನ ಮದುವೆ ವಿಚಾರವನ್ನು 'ಗರುಡ' ಚಿತ್ರದ ಶೂಟಿಂಗ್ ಸೆಟ್ನಲ್ಲೇ ನಾನು ಅನೌನ್ಸ್ ಮಾಡಿದೆ. ನನ್ನ ಮದುವೆಗೆ ಒಂದು ವಾರ ಇರುವವರೆಗೂ ನಾನು ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದೆ ಎಂದು ಹೇಳಿಕೊಂಡರು. ಆಶಿಕಾ ರಂಗನಾಥ್ ಮಾತನಾಡಿ 'ಮುಗುಳ್ನಗೆ' ನಂತರ ನಾನು ಈ ಚಿತ್ರಕ್ಕೆ ಸಹಿ ಮಾಡಿದೆ. ಚಿತ್ರದಲ್ಲಿ ನಾನು ಕಾಲೇಜು ಹುಡುಗಿ ಪಾತ್ರದಲ್ಲಿ ನಾನು ನಟಿಸಿದ್ದೇನೆ. ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದರು.
ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಧನು ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಇದ್ದು ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾವಾಗಿದೆ. ಚಿತ್ರದಲ್ಲಿ ಕಾಮೆಡಿಗೂ ಹೆಚ್ಚು ಒತ್ತು ನೀಡಲಾಗಿದೆ ಎಂದು ಧನು ಕುಮಾರ್ ಹೇಳಿದರು. ಹೊಸಬರ ಸಿನಿಮಾವಾದರೂ ದೊಡ್ಡ ಬಜೆಟ್ನಲ್ಲೇ ಸಿನಿಮಾ ತಯಾರಾಗಿದೆ. ನಟ ಸಿದ್ಧಾರ್ಥ್ ಮಹೇಶ್ ತಂದೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಆದಿ ಲೋಕೇಶ್, ರಾಜೇಶ್ ನಟರಂಗ, ಕಾಮಿಡಿ ನಟ ಆನಂದ್, ರಮೇಶ್ ಪಂಡಿತ್ ಸೇರಿದಂತೆ ಬಹುತೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. ಸದ್ಯ ಚಿತ್ರತಂಡ ಗ್ರಾಫಿಕ್ಸ್ ಕೆಲಸದಲ್ಲಿ ಬ್ಯುಸಿ ಇದ್ದು ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.