ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಬಾಲಿವುಡ್ ತನ್ನದೇ ಆದ ಸ್ಥಾನವನ್ನು ಪಡೆದಿದೆ. ದೇಶದ ಒಟ್ಟಾರೆ ಸಿನಿ ಪ್ರಪಂಚವನ್ನು ನಾವು ನೋಡಿದ್ರೆ ತಕ್ಷಣಕ್ಕೆ ಕಣ್ಣ ಮುಂದೆ ಬಂದು ನಿಲ್ಲುವುದು ಹಿಂದಿ ಸಿನಿಮಾದಲ್ಲಿ ನಟಿಸಿರುವ ಮಾಹಾನ್ ದಿಗ್ಗಜರು. ಹಾಗಂತ ಬೇರೆ ಭಾಷೆಗಳಲ್ಲಿ ತೆರೆ ಕಂಡ ಸಿನಿಮಾಗಳು ಕಡಿಮೆಯೇನಿಲ್ಲ.
ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳು ಕೂಡ ದೇಶಾದ್ಯಂತ ಬಿಡುಗಡೆಯಾಗಿ ಸದ್ದು ಮಾಡಿವೆ. ಸೌತ್ ಇಂಡಿಯಾದಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಯಾಂಡಲ್ವುಡ್ ತಾರೆಯರು ಕೂಡ ಕೇವಲ ಇಂಡಿಯಾದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತಮ್ಮ ಕೀರ್ತಿಯನ್ನು ಮೆರೆಯುತ್ತಿದ್ದಾರೆ.
ಚಂದನವನ ಸ್ಟಾರ್ಸ್ ಇತ್ತೀಚೆಗೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಸೈ ಅನ್ನಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ತೆರೆ ಕಂಡಿದ್ದ ಟಾಲಿವುಡ್ನ ಈಗ, ಬಾಹುಬಲಿ ಸೇರಿದಂತೆ ಇತ್ತೀಚೆಗಷ್ಟೇ ತೆರೆ ಕಂಡ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಇದೀಗ ತೆರೆ ಮೇಲೆ ಬರಲು ಸಜ್ಜಾಗಿರುವ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್-3 ಸಿನಿಮಾದಲ್ಲೂ ಅಭಿನಯ ಚಕ್ರವರ್ತಿ ಕಾಣಿಸಿಕೊಂಡಿದ್ದು, ಬಾಲಿವುಡ್ನಲ್ಲೂ ತಮ್ಮ ಖದರ್ ತೋರುತ್ತಿದ್ದಾರೆ.
ನಮ್ಮ ನಟರು ಬೇರೆ ಭಾಷೆಯಲ್ಲಿ ನಟಿಸುತ್ತಿದ್ದಾರೆ ನಿಜ. ಆದ್ರೆ ಬಾಲಿವುಡ್ನ ಯಾರೆಲ್ಲ ಸಿನಿ ತಾರೆಯರು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಸ್ಟೋರಿ ನೋಡಿ.
ಹೌದು, ಬಾಲಿವುಡ್ನ ಕೆಲವು ಪ್ರಮುಖ ನಟರು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಮತ್ತು ಸಿನಿ ನಟರನ್ನು ಈ ಕೆಳಕಂಡಂತೆ ನೋಡಬಹುದು.
ಬಾಲಿವುಡ್ ಬಿಗ್ ಬಿ ಅಂತಾನೆ ಕರೆಸಿಕೊಳ್ಳುವ ಅಮಿತಾಬ್ ಬಚ್ಚನ್ ಬಾಲಿವುಡ್ ಸಿನಿ ಪ್ರಪಂಚದ ಮೇರು ನಟ. ಇವರು ಕನ್ನಡದ ಅಮೃತಧಾರೆ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಧ್ಯಾನ್ ಜೊತೆಯಾಗಿ ರಮ್ಯಾ ನಟಿಸಿದ್ದು ಇದರಲ್ಲಿ ಬಿಗ್ ಬಿ ಕಾಣಿಸಿಕೊಂಡಿದ್ದರು. ಇನ್ನು ಅಕ್ಷಯ್ ಕುಮಾರ್ ಕೂಡ ಡಾ.ವಿಷ್ಣುವರ್ಧನ್ ನಾಯಕನಾಗಿ ನಸಿದ್ದ ವಿಷ್ಣು ವಿಜಯ್ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು.