ಕನ್ನಡದಲ್ಲಿ ಈಗಾಗಲೇ ಅನೇಕ ಸಾಧಕರ ಕುರಿತು ಸಿನಿಮಾಗಳು ಮೂಡಿ ಬಂದಿವೆ. ಆ ಸಾಲಿಗೆ ಈಗ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತಾದ 'ತಿರುಕ' ಶೀರ್ಷಿಕೆಯ ಚಿತ್ರವೂ ಸೇರಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡ ಮಹತ್ವ ಪಡೆದಿದೆ. ನಾಡಿನ ದೊಡ್ಡ ಸಾಧಕರ ಪೈಕಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ಕೂಡ ಒಬ್ಬರು. ಅವರ ಜೀವನ ಚರಿತ್ರೆ ಈಗ ಸಿನಿಮಾ ಆಗುತ್ತಿದೆ.
ಈ ಚಿತ್ರವನ್ನು ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ತಿರುಕರ ಜೋಳಿಗೆ ಪವಾಡವನ್ನು ಸಿನಿಮಾ ಮೂಲಕ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಪಲ್ಲಕ್ಕಿ. ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ಮಾಡಿದ ಸಾಧನೆ ಅಪಾರ.
ಆ ಕುರಿತು ಸಿನಿಮಾ ಮೂಲಕ ಹೇಳುವ ಪ್ರಯತ್ನ ಮಾಡಿರುವ ನಿರ್ದೇಶಕರು, ಬಾಕೂರು, ಕುಂದಾಪುರ, ಭಟ್ಕಳ್, ರಾಯಚೂರು, ಬಳ್ಳಾರಿ ಪ್ರಯಾಣ ಮಾಡಿ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಅಲ್ಲದೆ ಈಗಾಗಲೇ ಚಿತ್ರದ ಹಾಡುಗಳ ಸಂಯೋಜನೆ ಕೂಡ ಆರಂಭಗೊಂಡಿದೆ.
ಲಾಕ್‌ಡೌನ್ ಮುಗಿದ ಬಳಿಕ ಈ ಕುರಿತು ಇನ್ನಷ್ಟು ಮಾಹಿತಿ ಹೊರ ಬರಲಿದೆ. ನಿರ್ದೇಶಕರು ಈಗಾಗಲೇ ಎರಡು ಚಿತ್ರಗಳನ್ನ ನಿರ್ದೇಶಿಸಿ, ಬಿಡುಗಡೆಗೆ ಸಜ್ಜು ಮಾಡಿದ್ದಾರೆ. ಆ ಪೈಕಿ ಬರಗೂರು ಮತ್ತು ಮದಕರಿಪುರ ಚಿತ್ರಗಳು ಪೂರ್ಣಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿವೆ. ಸದ್ಯಕ್ಕೆ ರಾಧಾಕೃಷ್ಣ ಪಲ್ಲಕ್ಕಿ, 'ತಿರುಕ ‘ ಜೋಳಿಗೆಯ ಪವಾಡ ಸಿನಿಮಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.