ಬೆಂಗಳೂರು: ಚಲನಚಿತ್ರ ರಂಗದಲ್ಲಿ ತೊಡಗಿಸಿಕೊಂಡು ಮತ್ತೊಂದು ವೃತ್ತಿಯನ್ನು ನಡೆಸುವವರು ಹಲವು ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ನಾಯಕಿ ಸಂತೋಷಿ ಶ್ರೀಕರ್ ಸಹ ಹೆಜ್ಜೆ ಇಟ್ಟಿದ್ದಾರೆ. 2006ರಲ್ಲಿ ಬಿಡುಗಡೆ ಆದ ‘ಹನಿಮೂನ್ ಎಕ್ಸ್ಪ್ರೆಸ್’ ಹಾಗೂ ‘ತೆನಾಲಿ ರಾಮ’ ಚಿತ್ರದಲ್ಲಿ ನಟಿಸಿರುವ ಸಂತೋಷಿ, ಇದೀಗ ಹೊಸ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.
ಮೇಕಪ್, ಡಿಸೈನಿಂಗ್ ಕ್ಷೇತ್ರದಲ್ಲಿ ‘ಪ್ಲಶ್’ ಎಂಬ ಹೆಸರಿನ ಶಾಖೆ ಆರಂಭಿಸಿದ್ದು, ಒಂದೇ ವೇದಿಕೆಯಲ್ಲಿ ಎಲ್ಲಾ ಸೇವೆಗಳನ್ನು ನೀಡುವ ಉದ್ದೇಶ ಹೊಂದಿದ್ದಾರೆ. ‘ಬೆಂಗಳೂರಿನಲ್ಲಿ ಹೊಸ ಉದ್ಯಮ ಆರಂಭಿಸುತ್ತಿದ್ದೇನೆ. ಕಲಾವಿದರಿಗೆ ನಟನೆಯೊಂದೇ ಶಾಶ್ವತ ಅಲ್ಲ. ಅದರ ಜತೆಗೆ ಬೇರೆ ಕ್ಷೇತ್ರದತ್ತಲೂ ಗಮನ ಹರಿಸಬೇಕು. ಹಾಗಾಗಿ ಸೌಂದರ್ಯ ಕ್ಷೇತ್ರವನ್ನು ಆಯ್ದುಕೊಂಡು ಇದೀಗ ಪ್ಲಶ್ ಹೆಸರಿನ ಶಾಖೆಯನ್ನು ಬೆಂಗಳೂರಿನಲ್ಲಿ ತೆರೆದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ನಾನು ಎಲ್ಲಿಯೂ ಮೇಕಪ್, ಡಿಸೈನಿಂಗ್ ಬಗ್ಗೆ ಕೋರ್ಸ್ ಮಾಡಿಲ್ಲ. ಆದರೂ ಮೊದಲಿಂದಲೂ ಸೌಂದರ್ಯ ಕ್ಷೇತ್ರ ಮತ್ತು ಸಿನಿಮಾ ಎರಡಕ್ಕೂ ನಂಟಿರುವಂತಹ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆ ಇತ್ತು. ಅದರಂತೆ 6 ವರ್ಷದ ಹಿಂದೆಯೇ ‘ಫ್ಲಶ್’ ಅಕಾಡೆಮಿ ಶುರು ಮಾಡಿದ್ದೆ. ಇದೀಗ ಬೆಂಗಳೂರಿನಲ್ಲಿಯೂ ಅದರ ಶಾಖೆ ತೆರೆಯುತ್ತಿದ್ದೇವೆ ಎಂದು ಸಂತೋಷಿ ಶ್ರೀಕರ್ ಹೇಳಿದ್ದಾರೆ.
ಸೂಪರ್ ಮಾರ್ಕೆಟ್ ರೀತಿಯಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲಾ ಸೇವೆಗಳು ‘ಪ್ಲಶ್’ ಅಡಿಯಲ್ಲಿ ಸಿಗಲಿವೆ ಎಂದು ನಟಿ ಸಂತೋಷಿ ಶ್ರೀಕರ್ ಖುಷಿ ಹಂಚಿಕೊಂಡರು. ಭಾನುವಾರ ನಗರದ ವೆಲ್ಕಮ್ ಐಟಿಸಿ ಹೊಟೆಲ್ನಲ್ಲಿ ಪ್ಲಶ್ ಅಕಾಡೆಮಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ಲಶ್ ಅಕಾಡೆಮಿ ಒಂದು ರೀತಿ ವೆಡ್ಡಿಂಗ್ ಸೂಪರ್ ಮಾರ್ಕೆಟ್ ಇದ್ದಂತೆ. ವಧು-ವರರ ಮೇಕಪ್, ಹೇರ್ ಸ್ಟೈಲ್, ಕಾಸ್ಟೂಮ್ನಿಂದ ಹಿಡಿದು ಎಲ್ಲಾ ಬಗೆಯ ಸೇವೆಯೂ ಪ್ಲಶ್ನಿಂದ ಸಿಗಲಿದೆ. 2014ರಲ್ಲಿಯೇ ತಮಿಳುನಾಡಿನ ಮಧುರೈನಲ್ಲಿ ‘ಪ್ಲಶ್’ ಅಕಾಡೆಮಿ ತೆರೆದಿದ್ದೇವೆ. ಸಾಕಷ್ಟು ಮಂದಿ ಅಕಾಡೆಮಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಈಗಲೂ ಪಡೆದುಕೊಳ್ಳುತ್ತಿದ್ದಾರೆ ಎಂದರು.