ಗೊಂಬೆಗಳ ಲವ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಾವನಾ ಗೌಡ, ಆ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಪಾವನಾ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯಿತ್ತು. ಜೊತೆಗೆ ಅವರು ಹಲವು ಚಿತ್ರಗಳ ಪತ್ರಿಕಾಗೋಷ್ಠಿಗಳಲ್ಲಿ ಕಾಣಿಸಿಕೊಂಡಿದ್ದರು.
ಇಷ್ಟಕ್ಕೂ ಪಾವನಾ ಕೈಯಲ್ಲಿ ಎಷ್ಟು ಚಿತ್ರಗಳಿವೆ? ಅವರೆಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಿರಲಿಲ್ಲ. ಇದೀಗ ಪಾವನಾ ಅವರೇ ಲೆಕ್ಕ ಕೊಟ್ಟಿದ್ದಾರೆ. ಇತ್ತೀಚೆಗೆ ಮಾತನಾಡಿರುವ ಅವರು, ಎಂಟು ಚಿತ್ರಗಳಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ರುದ್ರಿ, ಮೈಸೂರು ಡೈರೀಸ್, ಕನ್ನಡಿಗ, ತೂತು ಮಡಿಕೆ, ಕಲಿವೀರ, ಸದ್ದು, ಮೆಹಬೂಬ ಮತ್ತು ಫೈಟರ್ ಚಿತ್ರಗಳಲ್ಲಿ ಪಾವನಾ ನಟಿಸಿದ್ದಾರಂತೆ. ಈ ಪೈಕಿ ಆರು ಚಿತ್ರಗಳು ಬಿಡುಗಡೆ ಸಿದ್ಧವಾಗಿದೆಯಂತೆ. ಮೆಹಬೂಬ ಮತ್ತು ಫೈಟರ್ ಚಿತ್ರಗಳ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಆ ಚಿತ್ರಗಳ ಚಿತ್ರೀಕರಣ ಮುಗಿದರೆ ಎಂಟು ಚಿತ್ರಗಳಾದಂತಾಗುತ್ತದೆ.