ಕರ್ನಾಟಕ ರಾಜ್ಯದ ಪ್ರಮುಖ ಭಾಷೆ ಕನ್ನಡ, ಇದರ ಜೊತೆಗೆ ಕರ್ನಾಟಕದಲ್ಲಿ ಪ್ರಾದೇಶಿಕ ಭಾಷೆಗಳಾಗಿ ಕೊಡವ, ತುಳು, ಕೊಂಕಣಿ ಹಾಗೂ ಉತ್ತರ ಕರ್ನಾಟಕ ಶೈಲಿಯ ಭಾಷೆಗಳು ಇವೆ. ಕೊಡವ ಭಾಷೆ, ಮಡಿಕೇರಿ ಸುತ್ತಮುತ್ತಲಿನ ಜನರ ಆಡುಭಾಷೆಯಾಗಿದೆ. ತುಳು ಭಾಷೆ ಕರಾವಳಿ ತೀರದ ಜನರ ಆಡುಭಾಷೆ. ವಿಶೇಷ ಎಂದರೆ ತುಳುಭಾಷೆ ಸಾಂಸ್ಕೃತಿಕವಾಗಿ ಬಹಳ ವೈವಿಧ್ಯತೆಯನ್ನು ಹೊಂದಿರುವ ಭಾಷೆಯಾಗಿದೆ. ಅಲ್ಲದೆ, ಕರಾವಳಿ ತೀರದ ಬಹುತೇಕ ದಿಗ್ಗಜರು ಕನ್ನಡ ಭಾಷೆಗೆ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಆದರೆ, ತುಳುಭಾಷೆಗೆ ಕರ್ನಾಟಕದಲ್ಲಿ ಹೇಳಿಕೊಳ್ಳುವಷ್ಟು ಪ್ರಾಧ್ಯಾನ್ಯತೆ ಸಿಕ್ಕಿಲ್ಲ ಎಂಬುದು ಕರಾವಳಿ ತೀರದ ಜನರ ಮಾತು. ಆದರೆ, ಈಗ ಕರಾವಳಿ ತೀರದ ತುಳುಭಾಷೆಗೆ ಕರ್ನಾಟಕದಲ್ಲಿ ಪ್ರಾಧಾನ್ಯತೆ ಸಿಗಬೇಕು ಎಂದು ನಟ ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ.
ರಾಜ್ಯದ ಪ್ರಾದೇಶಿಕ ಭಾಷೆಯಲ್ಲೊಂದಾದ ತುಳುವಿಗೆ ಕೂಡಾ ಪ್ರಾಧಾನ್ಯತೆ ಬೇಕು: ರಿಷಭ್ ಶೆಟ್ಟಿ - ಮಡಿಕೇರಿ
ಕರ್ನಾಟಕದ ಪ್ರಾದೇಶಿಕ ಭಾಷೆ ತುಳುವಿಗೆ ಪ್ರಾಧಾನ್ಯತೆ ದೊರೆಯಬೇಕು. ದೇಶದ ಇತರ ಭಾಷೆಗಳಲ್ಲಿ ಕನ್ನಡಕ್ಕೆ ಹೇಗೆ ಪ್ರಾಧಾನ್ಯತೆ ದೊರೆಯಬೇಕು ಎಂದು ನಾವು ಬಯಸುತ್ತೇವೆಯೋ ಅದೇ ರೀತಿ ರಾಜ್ಯದ ಇತರೆ ಭಾಷೆಗಳಂತೆ ತುಳುವಿಗೂ ಮಾನ್ಯತೆ ದೊರೆಯಬೇಕು ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ.
'ಗಿರಿಗಿಟ್' ಚಿತ್ರದ ಯಶಸ್ವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಷಭ್ ಶೆಟ್ಟಿ, ರಾಜ್ಯದ ಪ್ರತಿ 20 ಕಿ.ಮಿಗೂ ಮಾತನಾಡುವ ಭಾಷೆ, ಆಹಾರ ಪದ್ಧತಿ, ಸಂಸ್ಕೃತಿ ಎಲ್ಲ ವಿಭಿನ್ನವಾಗಿದೆ. ಕೊಂಕಣಿ, ಬ್ಯಾರಿ, ತುಳು ಭಾಷೆಗಳಿಗೆ ಅದರದ್ದೇ ಆದ ಪ್ರಾಧ್ಯಾನತೆ ಇದೆ. ಅವರ ಭಾವನೆಗಳಿಗೂ ನಾವು ಬೆಲೆ ನೀಡಬೇಕು. ಕರ್ನಾಟಕ ಕೂಡಾ ಒಂದು ಮಿನಿ ಇಂಡಿಯಾ ಇದ್ದ ಹಾಗೆ. ಪ್ರತಿ ಭಾಗದಲ್ಲೂ ಭಾಷೆಯ ವೈವಿಧ್ಯತೆ ಇದೆ. ನಾನು ದಕ್ಷಿಣ ಕನ್ನಡದವನಾದರೂ ನಾನು ಕುಂದಾಪುರ ಕನ್ನಡ ಮಾತನಾಡುತ್ತೇನೆ. ನಾವು ಮಾತನಾಡುವ ಎಲ್ಲ ಪ್ರಾದೇಶಿಕ ಭಾಷೆಗಳು ಕನ್ನಡವೇ ಎಂದು ರಿಷಭ್ ಶೆಟ್ಟಿ ಹೇಳಿದರು. ಏನೇ ಇರಲಿ ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಭಾಷೆಗಳನ್ನು ಪ್ರೋತ್ಸಾಹಿಸುವ ಈ ಸಂದರ್ಭದಲ್ಲಿ ತಮ್ಮದೇ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸುವುದರಲ್ಲಿ ತಪ್ಪಿಲ್ಲ ಎನ್ನಬಹುದು.