ಯುವರತ್ನ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಪುನೀತ್ ರಾಜ್ಕುಮಾರ್ ಮತ್ತು ಹೊಂಬಾಳೆ ಫಿಲಮ್ಸ್ ನಿರ್ಮಾಣದ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಸಂತೋಷ್ ಆನಂದರಾಮ್ ಹೇಳಿದ್ದರು. ಆದರೆ ಆ ಚಿತ್ರ ಬಿಡುಗಡೆಯಾಗಿ ಇಷ್ಟು ದಿನಗಳಾದರೂ ಹೊಸ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಆದರೆ ಇದೀಗ ಅಭಿಮಾನಿಗಳ ಪ್ರಶ್ನೆಗೆ ಸಂತೋಷ್ ಕೊನೆಗೂ ಅಂತ್ಯಹಾಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಜೊತೆ ಮುಂದಿನ ವರ್ಷ ಹೊಸ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಸಂತೋಷ್ ಆನಂದ್ರಾಮ್ ಈ ಮೊದಲು ಹೊಂಬಾಳೆ ಫಿಲಮ್ಸ್ ನಿರ್ಮಾಣದಲ್ಲಿ ರಾಜಕುಮಾರ ಮತ್ತು ಯುವರತ್ನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಎರಡೂ ಚಿತ್ರಗಳು ಯಶಸ್ವಿಯಾಗಿದ್ದವು. ಹಾಗಾಗಿ ಇದೇ ಕಾಂಬಿನೇಷನ್ನಲ್ಲಿ ಇನ್ನೊಂದು ಚಿತ್ರ ಮಾಡುವುದಾಗಿ ಸಂತೋಷ್ ಘೋಷಿಸಿದ್ದರು.
ಆದರೆ ಚಿತ್ರ ಅಂದುಕೊಂಡಂತೆ ಇದುವರೆಗೂ ಸೆಟ್ಟೇರಿರಲ್ಲ. ಈ ಮಧ್ಯೆ ಜಗ್ಗೇಶ್ ಅಭಿನಯದಲ್ಲಿ ‘ಶ್ರೀ ಗುರು ರಾಘವೇಂದ್ರ ಎಂಟರ್ಪ್ರೈಸಸ್’ ಎಂಬ ಚಿತ್ರ ಶುರು ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರವು ಶುರುವಾಗಿಲ್ಲ. ಈ ನಡುವೆ ಪುನೀತ್ ಅಭಿನಯದ ಹೊಸ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸುವುದಾಗಿ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.