ಕರ್ನಾಟಕ

karnataka

ETV Bharat / sitara

ಡಿಸ್ಕೋ ಸಾಂಗ್‌ ಮಾಂತ್ರಿಕ ಬಪ್ಪಿ ಲಹರಿ ಅವರನ್ನು ನೆನಪು ಮಾಡುವ ಅತ್ಯದ್ಭುತ ಟಾಪ್​ 10 ಹಾಡುಗಳು ಯಾವವು ಗೊತ್ತಾ? - ಬಪ್ಪಿ ಹಾಡಿದ ಕನ್ನಡ ಸಿನಿಮಾಗಳು

ನೂರಾರು ಹಾಡುಗಳಿಗೆ ಜನ್ಮ ನೀಡಿರುವ ಬಪ್ಪಿ ಲಹರಿ ಭಾರತೀಯ ಚಿತ್ರರಂಗ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಅವರ ಸಾಧನೆ ಕೇವಲ ಡಿಸ್ಕೋ ಹಾಡಿಗೆ ಮಾತ್ರ ಸೀಮಿತವಾಗಿರಲ್ಲ. ಗಝಲ್​, ತ್ಯಾಗ ಮತ್ತು ಪ್ರೀತಿಯಿಂದ ಹಿಡಿದು ನಟನೆಯಲ್ಲಿಯೂ ಅವರು ಹೆಸರು ಮಾಡಿದ್ದರು. ಅನೇಕ ಚಿತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು. ಸದ್ಯ ಅವರ ಅಗಲಿಕೆ ತುಂಬಲಾರದ ನಷ್ಟ.

Remembering the Disco King through his 10 evergreen songs
Remembering the Disco King through his 10 evergreen songs

By

Published : Feb 17, 2022, 3:16 PM IST

ಮುಂಬೈ (ಮಹಾರಾಷ್ಟ್ರ): ತಿಂಗಳಲ್ಲಿಯೇ ಇಬ್ಬರು ದಿಗ್ಗಜ ಹಾಡುಗಾರರನ್ನು ಭಾರತೀಯ ಚಿತ್ರರಂಗ ಕಳೆದುಕೊಂಡಿದೆ. ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರು ಫೆ.06 ರಂದು ಅಗಲಿದ್ದು, ಬುಧವಾರ ರಾತ್ರಿ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹರಿ (69) ನಿಧನರಾಗಿದ್ದಾರೆ. ಈ ಮೂಲಕ ಇಬ್ಬರನ್ನು ಕಳೆದುಕೊಂಡ ಸಂಗೀತ ಲೋಕ ಬಡವಾಗಿದೆ.

ಜನನ:ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಪ್ಪಿ ಸಂಗೀತದಲ್ಲಿ ಹೆಸರು ಮಾಡಲು ಅವರ ಪೋಷಕರೇ ಮೂಲ ಕಾರಣ. ಶಾಸ್ತ್ರೀಯ ಸಂಗೀತ ಕಲಿತಿದ್ದ ಅವರ ತಂದೆ ಅಪರೇಶ್ ಲಾಹಿರಿ ಮತ್ತು ತಾಯಿ ಬಾನ್ಸುರಿ ಅವರ ಮಾರ್ಗದರ್ಶನದಲ್ಲೇ ಬೆಳೆದ ಬಪ್ಪಿ ಮುಂದೆ ಸ್ವರ ಸಾಮ್ರಾಟರಾಗಿದ್ದು ಇತಿಹಾಸ. ರಕ್ತದಲ್ಲೇ ಬಂದಿದ್ದ ಸಂಗೀತದ ಕಲೆಯನ್ನು ಇಡೀ ದೇಶಕ್ಕೆ ಹಂಚಿ ಇಂದು ಅದರಿಂದ ಮರೆಯಾಗಿದ್ದು ದುರಂತ.

ಜುಗಲ್​ಬಂದಿ:ಬಪ್ಪಿ ತಮ್ಮ ವಿಶಿಷ್ಟ ಕಂಠ ಮತ್ತು ಸುಮಧುರ ಸಂಯೋಜನೆಯಿಂದ ತಮ್ಮದೇ ಆದ ಗುರುತನ್ನು ಹೊಂದಿದ್ದರು. ಅಲ್ಲದೇ ರೋಮ್ಯಾಂಟಿಕ್ ಹಾಡುಗಳ ಮೂಲಕ ಲಕ್ಷಾಂತರ ಮನಸ್ಸು ಕದ್ದಿದ್ದರು. ನಾಲ್ಕು ದಶಕಗಳ ಕಾಲ ಹಾಡುತ್ತಾ ಮನರಂಜನೆ ನೀಡಿದ್ದಾರೆ. ಬಪ್ಪಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಸಂಬಂಧಿಯಾಗಿದ್ದರು.

ಗುರು-ಶಿಷ್ಯರಂತೆ ಇದ್ದ ಇವರ ಒಡನಾಟ ಅನೇಕ ಸ್ಮರಣೀಯ ಹಾಡುಗಳನ್ನು ನೀಡಿದೆ. ನನ್ಹಾ ಶಿಕಾರಿ (1973) ಅವರ ಸಂಗೀತ ಸಂಯೋಜನೆ ಮಾಡಿದ ಮೊದಲ ಚಿತ್ರವಾಗಿದ್ದು ಮುಕೇಶ್ ಕುಮಾರ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅವರು ಸಂಯೋಜನೆ ಮಾಡಿದ ಅನೇಕ ಹಾಡುಗಳು ಈಗಲೂ ಆಗಾಗಾ ಕಿವಿಗೆ ಬೀಳುತ್ತಲೇ ಇರುತ್ತವೆ.

ವರ್ಲ್ಡ್ ರೆಕಾರ್ಡ್ಸ್:1983-1985ರ ಅವಧಿಯಲ್ಲಿ ಜೀತೇಂದ್ರ ನಾಯಕನಾಗಿ ನಟಿಸಿದ 12 ಸೂಪರ್ - ಹಿಟ್ ರಜತ ಮಹೋತ್ಸವದ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಅವರು ದಾಖಲೆಯನ್ನು ನಿರ್ಮಿಸಿದ್ದರು. 1986ರಲ್ಲಿ 33 ಚಲನಚಿತ್ರಗಳಿಗೆ 180ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿದರು. 2020ರಲ್ಲಿ ಬಿಡುಗಡೆಯಾದ ಬಾಘಿ 3 ಅವರ ಕೊನೆಯ ಹಾಡಾಗಿದೆ.

ಆಭರಣ ಪ್ರಿಯ:ಬಾಲಿವುಡ್ ಸಂಗೀತ ಲೋಕದಲ್ಲಿ ಪ್ರಾಬಲ್ಯತೆ ಮೆರೆದ ಬಪ್ಪಿ ಅವರ ಇನ್ನೊಂದು ವಿಶೇಷತೆ ಅಂದ್ರೆ ಚಿನ್ನಾಭರಣ ಮೇಲಿನ ಪ್ರೀತಿ. ಆಭರಣ ಪ್ರಿಯರಾಗಿದ್ದ ಅವರು ಅದೇ ಕಾರಣಕ್ಕೆ ಯಾವಾಗಲೂ ಮೈಮೇಲೆ ತರಹೇವಾರಿ ಬಂಗಾರದ ಚೈನ್​ಗಳನ್ನು ಹಾಕುತ್ತಿದ್ದರು. ಕಪ್ಪು ಕನ್ನಡಕವೊಂದು ಅವರ ಜೊತೆಗೆ ಯಾವಾಗಲೂ ಇರುತ್ತಲೇ ಇತ್ತು. ಬಪ್ಪಿ ಅವರನ್ನು ಗುರುತಿಸಲು ಇವಷ್ಟೇ ಸಾಗಿದ್ದವು. ಆದರೆ, ಈಗ ಅವೆಲ್ಲವೂ ನೆನಪು ಮಾತ್ರ.

ಡಿಸ್ಕೋ ಸಾಂಗ್‌: ಬಪ್ಪಿ ಅವರು ತಮ್ಮದೇ ಆದ ವಿಶಿಷ್ಟ ಗಾಯನದ ಮೂಲಕ ಮರೆಯಲಾರದ ಅನೇಕ ಹಾಡುಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 80-90ರ ದಶಕದಲ್ಲಿ ಡಿಸ್ಕೋ ಸಾಂಗ್‌ಗಳಿಗೆ ಸಖತ್ ಫೇಮಸ್ ಆಗಿದ್ದ ಬಪ್ಪಿ, ಆ ಕಾಲಕ್ಕೆ ಸಿನಿಮಾ ಸಂಗೀತದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ್ದರು. ಅವರ ಅನೇಕ ಹಾಡುಗಳನ್ನು ಬಾಲಿವುಡ್‌ನಲ್ಲಿ ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ.

ಐ ಎಮ್​ ಎ ಡಿಸ್ಕೋ ಡ್ಯಾನ್ಸರ್ (ಡಿಸ್ಕೋ ಡ್ಯಾನ್ಸರ್): ಮಿಥುನ್ ಚಕ್ರವರ್ತಿ ನಾಯಕನಾಗಿ ನಟಿಸಿರುವ ಡಿಸ್ಕೋ ಡ್ಯಾನ್ಸರ್​ ಚಿತ್ರದ ಈ ಹಾಡು ಇಂದಿಗೂ ಪ್ರಸ್ತುತ. ಇದಷ್ಟೇ ಅಲ್ಲದೇ ಈ ಜೋಡಿಯ ಸಾಕಷ್ಟು ಡಿಸ್ಕೋ ಹಾಡುಗಳು ಇಂದಿಗೂ ಜನಪ್ರಿಯ. ಹಳೆ ಕಾಲದಲ್ಲಿ ಮಿಂಚು ಹರಿಸುವ ಹೊಸ ಟ್ರೆಂಡ್‌ ಸೃಷ್ಟಿಸುವ ಮೂಲಕ ಬಪ್ಪಿ ದಾಖಲೆ ಬರೆದರು. ಈ ಜನಪ್ರಿಯ ಹಾಡಿಗೆ ಬಪ್ಪಿ ಲಹಿರಿ ಸಂಗೀತ ಸಂಯೋಜನೆ ಮಾಡಿದ್ದರೆ ವಿಜಯ್ ಬೆನೆಡಿಕ್ಟ್ ಅವರು ಧ್ವನಿ ನೀಡಿದ್ದಾರೆ. 80ರ ದಶಕದಲ್ಲಿ ಹುಟ್ಟಿದ ಈ ಹಾಡು ಅವರ ಅತ್ಯದ್ಭುತ ಹಾಡುಗಳಲ್ಲಿ ಖಜಾನೆಯಲ್ಲಿ ಅರಳಿದ ಮೊದಲನೆಯದ್ದಾಗಿದೆ.

ಯಾರ್ ಬಿನ ಚೇನ್ ಕಾಹ ರೆ (ಸಾಹೇಬ್): 1985 ರಲ್ಲಿ ಬಿಡಗಡೆಯಾದ ಅನಿಲ್ ಕಪೂರ್ ಮತ್ತು ಅಮೃತಾ ಸಿಂಗ್ ಅಭಿನಯದ ಸಾಹೇಬ್‌ ಚಿತ್ರದಲ್ಲಿನ ಯಾರ್ ಬಿನ ಚೇನ್ ಕಾಹ ರೆ ಎಂಬ ಮತ್ತೊಂದು ಇವರ ಜನಪ್ರಿಯ ಹಾಡಾಗಿದೆ. ಅವರೇ (ಬಪ್ಪಿ) ಸಂಯೋಜನೆ ಮಾಡಿದ್ದರೆ ಎಸ್ ಜಾನಕಿಯರು ಈ ಹಾಡನ್ನು ಹಾಡಿದ್ದಾರೆ. ಚಿತ್ರದ ಹಾಡಿನಲ್ಲಿ ಮಿಂಚಿನಂತಹ ವೇಷಭೂಷಣ ಮತ್ತು ಸೆಟ್ ವಿನ್ಯಾಸ ಈಗಲೂ ಕಣ್ಣಮುಂದೆ ಬರುವಂತಿದೆ. ಸಾಹೇಬ್​​ ಚಿತ್ರದ ಹಾಡುಗಳಲ್ಲಿಯೇ ಮೈಮರೆಸುವ ಬಪ್ಪಿ ಲಹರಿ ಅವರು ಸೃಷ್ಟಿಸಿದ ಸಂಗೀತ ಲೋಕ ಇಂದಿಗೂ ಪ್ರಸ್ತುತ.

ರಾತ್ ಬಾಕಿ ಬಾತ್ ಬಾಕಿ (ನಮಕ್ ಹಲಾಲ್):1982ರಲ್ಲಿ ತೆರೆಕಂಡ ನಮಕ್ ಹಲಾಲ್ ಬಪ್ಪಿ ಅವರ ಸಂಗೀತ ಕಲೆಯಿಂದ ಹೊರ ಬಂದ ಮತ್ತೊಂದು ಚಿತ್ರ. ರಾತ್ ಬಾಕಿ ಬಾತ್ ಬಾಕಿ ಎಂಬ ಹಾಡಿಗೆ ಬಪ್ಪಿ ಸಂಗೀಯ ನಿರ್ದೇಶನ ನೀಡಿದ್ದರೆ ಆಶಾ ಭೋನ್ಸಾಲೆ ಅವರು ಕಂಠದಾನ ಮಾಡಿದ್ದಾರೆ. ಚಿತ್ರದಲ್ಲಿ ಪರ್ವೀನ್ ಬಾಬಿ, ಶಶಿ ಕಪೂರ್ ಮತ್ತು ಅಮಿತಾಬ್ ಬಚ್ಚನ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪರ್ವೀನ್ ಬಾಬಿ ಅವರ ಕಣ್ಣು ಕುಕ್ಕಿಸುವ ಉಡುಗೆ ಮತ್ತು ಅವರ ನೃತ್ಯ ಈ ಹಾಡನ್ನು ಮತ್ತೊಂದು ಹಂತಕ್ಕೆ ತಲುಪಿಸಿತ್ತು. ಚಿತ್ರದ ಎಲ್ಲ ಹಾಡುಗಳು ಸೂಪರ್-ಡ್ಯೂಪರ್ ಹಿಟ್ ಆಗಿದ್ದರಿಂದ ಬಾಕ್ಸ್ ಆಫೀಸ್ ಹೊಸ ದಾಖಲೆ ಮಾಡಿತು.

ಪ್ಯಾರ್ ಮಂಗಾ ಹೈ ತುಮ್ಹಿಸೆ (ಕಾಲೇಜು ಹುಡುಗಿ): ಬಪ್ಪಿ ಅವರು ಕೇವಲ ಡಿಸ್ಕೋ ಹಾಡುಗಳಿಗಷ್ಟೇ ಸೀಮಿತರಾಗುರಲಿಲ್ಲ ಅನ್ನೋದಕ್ಕೆ 1978 ರಲ್ಲಿ ತೆರೆ ಕಂಡ ಕಾಲೇಜ್ ಗರ್ಲ್ ಚಿತ್ರವೇ ಸಾಕ್ಷಿ. ಕಿಶೋರ್ ಕುಮಾರ್ ಅವರು ಹಾಡಿರುವ ಪ್ಯಾರ್ ಮಂಗಾ ಹೈ ತುಮ್ಹಿಸೆ ಎಂಬ ಹೃದಯಸ್ಪರ್ಶಿ ಹಾಡಿಗೆ ಅವರೇ (ಬಪ್ಪಿ) ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಸಚಿನ್, ಬಿಂದಿಯಾ ಗೋಸ್ವಾಮಿ, ರೀಟಾ ಭಾದುರಿ, ಭಗವಾನ್, ಪೈಂಟಲ್, ಹೀನಾ ಕೌಸರ್ ಮತ್ತು ಶ್ರೀರಾಮ್ ಲಾಗೂ ಅತ್ಯದ್ಭುತವಾಗಿ ನಟಿಸಿದ್ದಾರೆ. ಶಾಂತಿಲಾಲ್ ಸೋನಿ ನಿರ್ಮಿಸಿರುವ ಈ ಚಿತ್ರವನ್ನು ಎಸ್.ಡಿ.ನಾರಂಗ್ ನಿರ್ದೇಶಿಸಿದ್ದಾರೆ.

ಕಿಸಿ ನಜರ್ ಕೋ ತೇರಾ (ಐತ್‌ಬಾರ್): ಬಪ್ಪಿ ಬಹುಮುಖ ಪ್ರತಿಭೆಯಾಗಿದ್ದರಿಂದ ಗಜಲ್‌ಗಳಂತಹ ಹೃದಯಸ್ಪರ್ಶಿ ಹಾಡುಗಳಿಗೂ ಅವರು ಹೆಸರುವಾಸಿಯಾಗಿದ್ದರು. ಗಜಲ್​ಗಳ ಮೂಲಕ ಮೈಮರೆಸುವ, ಮೈಜುಮ್ಮೆನ್ನಿಸುವ ನೋವಿನ ಕಥೆ ಹೇಳಿಸುತ್ತಿದ್ದ ಬಪ್ಪಿ ಸಿದ್ಧ ಹಸ್ತರು. ಈ ಟ್ರ್ಯಾಕ್​ನಿಂದಲೂ ಅವರನ್ನು ಮೀರಿಸುವ ಬೇರೆ ಯಾವುದೇ ಸಂಗೀತ ಮಾಂತ್ರಿಕನಿಂದ ಇದುವರೆಗೂ ಸಾಧ್ಯವಾಗಿಲ್ಲ. 1985 ರಲ್ಲಿ ತೆರೆಕಂಡ ರಾಜ್ ಬಬ್ಬರ್, ಡಿಂಪಲ್ ಕಪಾಡಿಯಾ ಮತ್ತು ಸುರೇಶ್ ಒಬೆರಾಯ್ ನಟಿಸಿದ ಐತ್‌ಬಾರ್ ಚಿತ್ರದ ಕಿಸಿ ನಜರ್ ಕೋ ತೇರಾ ಹಾಡೇ ಇದಕ್ಕೆ ಸಾಕ್ಷಿ. ಭೂಪೇಂದ್ರ ಮತ್ತು ಆಶಾ ಭೋನ್ಸಾಲೆ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.

ನೈನೋ ಮೈ ಸಪ್ನಾ (ಹಿಮ್ಮತ್‌ವಾಲಾ):1983ರಲ್ಲಿ ತೆರೆಕಂಡ ಹಿಮ್ಮತ್‌ವಾಲಾ ಚಿತ್ರದ ನೈನೋ ಮೈ ಸಪ್ನಾ ಹಾಡು ಸಹ ಅವರ ಯಶಸ್ಸಿನ ಪಟ್ಟಿಯ ಮತ್ತೊಂದು ಹಾಡು. ಬಾಲಿವುಡ್​ನಲ್ಲಿ ಶ್ರೀದೇವಿ ಅವರನ್ನು ಹೆಚ್ಚು ಬೆಳಕಿಗೆ ತಂದ ಹಾಡು ಇದಾಗಿದೆ. ಅವರ ಅದ್ಭುತ ಟ್ಯೂನ್​ ಆ ಕಾಲದಲ್ಲಿ ಚಿತ್ರದ ಗೆಲುವಿನ ಮೊದಲ ಮೆಟ್ಟಿಲಾಯಿತು. ಜೀತೇಂದ್ರ ಮತ್ತು ಶ್ರೀದೇವಿ ಅವರನ್ನು ಕೇಂದ್ರೀಕರಿಸಿ ಈ ಹಾಡು ರಚಿಸಲಾಗಿದೆ. ಈ ಹಾಡನ್ನು ಬಪ್ಪಿ ಸಂಯೋಜಿಸಿದ್ದರೆ ಆಶಾ ಭೋನ್ಸಾಲೆ ಮತ್ತು ಕಿಶೋರ್ ಕುಮಾರ್ ಜೋಡಿಯಾಗಿ ಹಾಡಿದ್ದಾರೆ. ಶ್ರೀದೇವಿ ಅವರ ನೃತ್ಯ ಅವರನ್ನು ಬೇರೊಂದು ಲೋಕಕ್ಕೆ ತಂದು ನಿಲ್ಲಿಸಿತ್ತು.

ತಮ್ಮಾ ತಮ್ಮ ಲೋಗೆ (ಥಾನೇದಾರ್):1990ರಲ್ಲಿ ತೆರೆಗೆ ಬಂದ ಥಾನೇದಾರ್ ಚಿತ್ರದ ಚಮತ್ಕಾರಿ ನೃತ್ಯ ಬಾಲಿವುಡ್​ನಲ್ಲಿ ಹೊಸ ಟ್ರೆಂಡ್​ ಕಟ್ಟಿಕೊಟ್ಟಿತು. ಮೈಕೆಲ್ ಜಾಕ್ಸನ್ ಹೋಲುವಂತಹ ಸ್ಟೆಪ್ಟ್​ಗಳು ಚಿತ್ರದಲ್ಲಿ ಕಾಣಬಹುದು. ಚಿತ್ರದಲ್ಲಿ ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದಿವಂಗತ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸ್ವತಃ ಹಾಡುಗಾರರು ಆಗಿದ್ದ ಬಪ್ಪಿ ಅವರು ತಮ್ಮಾ ತಮ್ಮ ಲೋಗೆ ಹಾಡಿಗೆ ಧ್ವನಿ ನೀಡಿದ್ದಾರೆ. ಅವರೊಂದಿಗೆ ಅನುರಾಧಾ ಪೌಡ್ವಾಲ್ ಕಂಠದಾನ ಮಾಡಿದ್ದಾರೆ. ಈ ಹಾಡನ್ನು ಬದ್ರಿನಾಥ್ ಕಿ ದುಲ್ಹನಿ ಚಿತ್ರದಲ್ಲಿ ಮರು ಬಳಕೆ ಮಾಡಿಕೊಳ್ಳಲಾಗಿದೆ.

ಮನ್​ ಹೋ ತುಮ್ ಬೇಹದ್ ಹಸೀನ್ (ಟೂಟೆ ಖಿಲೋನ್): ಇದು ಬಪ್ಪಿ ಅವರ ಮತ್ತೊಂದು ಮಧುರ ಹಾಡು. 1978ರ ಬಿಡುಗಡೆಯಾದ ಶೇಖರ್ ಕಪೂರ್ ಮತ್ತು ಶಬಾನಾ ಅಜ್ಮಿ ನಟಿಸಿದ ಚಿತ್ರ ಇದಾಗಿದೆ. ಟೂಟೆ ಖಿಲೋನ್‌ ಎಂಬ ಹಾಡು ಚಿತ್ರದಲ್ಲಿ ಹೆಚ್ಚು ಗಮನ ಸೆಳೆದ ಹಾಡಾಗಿದ್ದು, ಶಬಾನಾ ತಂದೆ ಕೈಫಿ ಅಜ್ಮಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಈ ಹಾಡಿಗೆ ಯೇಸುದಾಸ್ ಅವರು ಕಂಠದಾನ ಮಾಡಿದ್ದಾರೆ. ಸೂಪರ್ ಡೂಪರ್ ಹಿಟ್ ಹಾಡುಗಳಲ್ಲಿ ಈ ಹಾಡು ಕೂಡ ಒಂದು. ಒಂದೇ ವೇದಿಕೆಯಲ್ಲಿ ಗಿಟಾರ್‌, ಪಿಯಾನೋ, ಕೋರಸ್​ಗಳ ಬಳಕೆ ಮಾಡಿದ್ದರಿಂದ ಹಿಂದಿ ಚಿತ್ರರಂಗದಲ್ಲಿ ರಚಿಸಲಾದ ಅತ್ಯಂತ ರೋಮ್ಯಾಂಟಿಕ್ ಹಾಡು ಇದಾಗಿದೆ.

ಆವೊ ತುಮ್ಹೆ ಚಾಂದ್ ಪೇ ಲೆ ಜಾಯೆನ್ (ಝಖ್ಮೀ):ನೈಟಿಂಗೇಲ್, ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಮೂಡಿಬಂದ ಮತ್ತೊಂದು ಹಾಡು. 1975 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಸುನೀಲ್ ದತ್ ಮತ್ತು ಆಶಾ ಪರೇಖ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆವೊ ತುಮ್ಹೆ ಚಾಂದ್ ಪೇ ಲೆ ಜಾಯೆನ್ ಹಾಡು ಬಪ್ಪಿ ಅವರ ಆರಂಭಿಕ ಹಿಟ್‌ಗಳಲ್ಲಿ ಒಂದಾಗಿದೆ.

ಕಭಿ ಅಲ್ವಿದಾ ನಾ ಕೆಹನಾ (ಚಲ್ತೆ ಚಲ್ತೆ): 1978 ರಲ್ಲಿ ತೆರೆ ಕಂಡ ಚಲ್ತೆ ಚಲ್ತೆ ಚಿತ್ರದ ಕಭಿ ಅಲ್ವಿದಾ ನಾ ಕೆಹನಾ ಹಾಡು ಯಾರೂ ಮರೆಯುವಂತಹದ್ದಲ್ಲ. ಬಪ್ಪಿ ಅವರ ಸಂಗೀತ ಲೋಕದಲ್ಲಿ ಈ ಹಾಡು ಸಹ ಅತ್ಯದ್ಭುತವಾಗಿದ್ದು.

ಶಾಲಾ ಕಾಲೇಜುಗಳ ಬೀಳ್ಕೊಡುಗೆಯ ಸಮಯದಲ್ಲಿ ಈ ಹಾಡಿನ ಸಾಲು ಕೀವಿಗೆ ಬಿದ್ದರೆ ಸಾಕು ವಿದ್ಯಾರ್ಥಿಗಳ ಕಣ್ಣೀರು ಸುರಿಸುದೇ ಬಿಡದು. ಸಿಮಿ ಗರೇವಾಲ್ ಮತ್ತು ವಿಶಾಲ್ ಆನಂದ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅಗಲಿಕೆ:ಇಂತಹ ನೂರಾರು ಹಾಡುಗಳಿಗೆ ಜನ್ಮ ನೀಡಿರುವ ಬಪ್ಪಿ ಲಹರಿ ಭಾರತೀಯ ಚಿತ್ರರಂಗ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಅವರ ಸಾಧನೆ ಕೇವಲ ಡಿಸ್ಕೋ ಹಾಡಿಗೆ ಮಾತ್ರ ಸೀಮಿತವಾಗಿರಲ್ಲ.

ಗಝಲ್​, ತ್ಯಾಗ ಮತ್ತು ಪ್ರೀತಿಯಿಂದ ಹಿಡಿದು ನಟನೆಯಲ್ಲಿಯೂ ಅವರು ಹೆಸರು ಮಾಡಿದ್ದರು. ಅನೇಕ ಚಿತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು. ಸದ್ಯ ಅವರ ಅಗಲಿಕೆ ತುಂಬಲಾರದ ನಷ್ಟ.

ABOUT THE AUTHOR

...view details