ಬೆಂಗಳೂರು:ಹೃದಯಾಘಾತದಿಂದ ನಿಧನರಾಗಿರುವ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಬೆಳಗ್ಗೆ 10 ಗಂಟೆಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಡಾ. ರಾಜ್ಕುಮಾರ್ ಸಮಾಧಿಯ ಸಮೀಪದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಅಂತಿಮ ವಿಧಿ-ವಿಧಾನ ನಡೆಯುವ ಸ್ಥಾಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು.
ಇದನ್ನೂ ಓದಿರಿ:ಪುನೀತ್ ಅಸ್ತಂಗತ: ಮುಂಜಾನೆಯೇ ನೆಚ್ಚಿನ ನಟನ ಅಂತಿಮಯಾತ್ರೆ ಆರಂಭ
ಪುನೀತ್ ಅವರ ಕುಟುಂಬ ಸದಸ್ಯರ ಇಚ್ಛೆಯಂತೆ ನಸುಕಿನ 5:30ರಿಂದ 6:30ರ ಒಳಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಲಿದೆ ಎಂದರು. ಕಂಠೀರವ ಕ್ರೀಡಾಂಗಣದಿಂದ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಗುತ್ತದೆ. ಈಗಾಗಲೇ ಮೆರವಣಿಗೆ ಸಾಗುವ ಮಾರ್ಗವನ್ನು ಗುರುತಿಸಿ ಅಗತ್ಯ ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದು, ಮೆರವಣಿಗೆ ಯುದ್ದಕ್ಕೂ ಪೊಲೀಸ್ ಭದ್ರತೆ ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಕುಟುಂಬ ಸದಸ್ಯರ ಇಚ್ಚೆಯಂತೆ ಬೆಳಗ್ಗೆ 10 ಗಂಟೆಗೆ ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ನಡೆಸಿದ ರೀತಿಯಲ್ಲೇ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಲು ತೀರ್ಮಾಣ ಕೈಗೊಳ್ಳಲಾಗಿದೆ.
ಅಂತ್ಯಕ್ರಿಯೆ ನಡೆಯುವ ಜಾಗ ಇಕ್ಕಟ್ಟಾಗಿರುವ ಕಾರಣ ಕುಟುಂಬಸ್ಥರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಸ್ಟುಡಿಯೋದ ಹೊರಭಾಗದಲ್ಲಿ 12 ಕಡೆ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿದೆ.