ಮುಂಬೈ :ಬಾಲಿವುಡ್ ನಟಿ ಕಂಗನಾ ರಣಾವತ್ ಜಾಹೀರಾತಿನಲ್ಲಿ ನಟಿ ಆಲಿಯಾ ಭಟ್ ಸಂಭಾಷಣೆ ಕುರಿತು ಪೋಸ್ಟ್ ಮಾಡಿದ್ದು, ಇದು "ಹಿಂದೂ ವಿರೋಧಿ ಪ್ರಚಾರ" ಎಂದು ಆರೋಪಿಸಿದ್ದಾರೆ.
ನಟಿ ಆಲಿಯಾ ಭಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅವರು ಕನ್ಯಾದಾನವನ್ನು ಪ್ರಶ್ನೆ ಮಾಡಿದ್ದರು. ಆ ಕುರಿತಂತೆ ನಟಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ವಸ್ತುಗಳನ್ನು ಮಾರಲು ಧರ್ಮ, ಅಲ್ಪಸಂಖ್ಯಾತರು-ಬಹುಸಂಖ್ಯಾತರು ರಾಜಕೀಯ ಬಳಕೆ ಮಾಡಿಕೊಳ್ಳಬೇಡಿ ಎಂದು ಎಲ್ಲಾ ಬ್ರ್ಯಾಂಡ್‌ಗಳಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ. ಉತ್ತಮ ಗ್ರಾಹಕರಿಗೆ ವಸ್ತು ಮಾರಾಟ ಮಾಡುವ ನೆಪದಲ್ಲಿ ವಿಭಜನೆಯ ಉದ್ದೇಶ ಇಟ್ಟುಕೊಳ್ಳಬೇಡಿ" ಎಂದು ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.
"ಹಿಂದುತ್ವ ತುಂಬ ಸೂಕ್ಷ್ಮವಾಗಿದೆ ಮತ್ತು ವೈಜ್ಞಾನಿಕವಾಗಿದೆ. ಮದುವೆಯಲ್ಲಿ ಹೆಣ್ಣು ತನ್ನ ಗೋತ್ರ, ರಕ್ತ ಸಂಬಂಧ ಬಿಟ್ಟು ಬೇರೆ ಮನೆಗೆ ಹೋಗುತ್ತಾಳೆ. ತಂದೆ ಮಗಳನ್ನು ಬೇರೆ ಗೋತ್ರದವರಿಗೆ ಕೊಡುವುದರಲ್ಲಿಯೂ ಕೂಡ ವೈಜ್ಞಾನಿಕ ಕಾರಣ ಇದೆ. ಕನ್ಯಾದಾನ ಎಂದರೆ ನಿಮ್ಮ ಮಗಳನ್ನು ಮಾರೋದು ಎಂದರ್ಥವಲ್ಲ. ದಾನ ಕೆಟ್ಟ ಶಬ್ಧ ಅಲ್ಲ, ನಿಮ್ಮ ಬುದ್ಧಿ-ಮನಸ್ಸು ಕೆಟ್ಟದ್ದಾಗಿದೆ" ಎಂದು ಕಂಗನಾ ಅಸಮಾಧಾನ ಹೊರ ಹಾಕಿದ್ದಾರೆ.
ಜಾಹೀರಾತೊಂದರಲ್ಲಿ ನಟಿಸಿರುವ ಆಲಿಯಾ, "ನಮ್ಮ ಮನೆಯಲ್ಲಿ ಎಲ್ಲರೂ ನನ್ನ ಮದುವೆ ಬಗ್ಗೆ ಯೋಚನೆ ಮಾಡುತ್ತಾರೆ. ಹೆಣ್ಣನ್ನು ತವರು ಮನೆಯಲ್ಲಿ ತಾತ್ಕಾಲಿಕ ಭಾಗ ಎಂದು ಪರಿಗಣಿಸಲಾಗುತ್ತದೆಯೇ? ನಾನು ದಾನ ಮಾಡುವ ವಸ್ತುವೇ? ಹೆಣ್ಣು ಬೇರೆಯವರ ಮನೆಗೆ ಹೋಗುವವಳು ಅಂತಾ ಯಾಕೆ ಹೇಳುವರು? ತಂದೆ ಮನೆ ಅವಳ ಮನೆಯಲ್ಲವೇ? ಯಾಕೆ ಹೆಣ್ಣನ್ನು ಧಾರೆ ಎರೆಯಬೇಕು?" ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಕಂಗನಾ ರಣಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ:ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ: ಸೋಶಿಯಲ್ ಮೀಡಿಯಾದಲ್ಲಿ ಬಯೋಪಿಕ್ ಚರ್ಚೆ