ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಸಹಾಯ ಮಾಡಿರುವುದು ನನಗೆ ಸಂತೋಷ ಮತ್ತು ತೃಪ್ತಿ ನೀಡಿದೆ ಎಂದು ನಟ ಸೋನು ಸೂದ್ ಹೇಳಿದರು.
ಹೈದರಾಬಾದ್‌ನ ಗಚ್ಚಿಬೌಲಿಯ ಸಂಧ್ಯಾ ಕನ್ವೆನ್ಷನ್‌ನಲ್ಲಿ ಸೈಬರಾಬಾದ್ ಪೊಲೀಸರು ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ಕರೆಗಳನ್ನು ನಿರ್ಲಕ್ಷಿಸಬೇಡಿ ಎಂದು ನನ್ನ ವ್ಯವಸ್ಥಾಪಕರಿಗೆ ಹೇಳಿದ್ದೆ. ಹಾಗಾಗಿ ದೇಶಾದ್ಯಂತ 7 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು ಎಂದರು.
ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಒಟ್ಟಾರೆಯಾಗಿ 7,26,727 ವಲಸೆ ಕಾರ್ಮಿಕರನ್ನು ತಮ್ಮ ತವರಿಗೆ ನಾವು ಸ್ಥಳಾಂತರಿಸಿದ್ದೇವೆ. 350 ವಲಸಿಗರನ್ನು ಮೊದಲ ಬಾರಿಗೆ ಕರ್ನಾಟಕಕ್ಕೆ ಕಳುಹಿಸಲಾಗಿದೆ. ಜೊತೆಗೆ ಸಂಕಷ್ಟದಲ್ಲಿರುವ ಸುಮಾರು 500 ಜನರಿಗೆ ಪಡಿತರ ಚೀಲಗಳನ್ನು ವಿತರಿಸಲಾಯಿತು ಎಂದರು.
ಇನ್ನು ಲಾಕ್ ಡೌನ್ ಸಮಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡರು. ನಾವು 2 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲು ಶ್ರಮಿಸಿದ್ದೇವೆ. ಈ ಸಾಂಕ್ರಾಮಿಕವು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಮರೆಯಲಾಗದ ಅನೇಕ ಕ್ಷಣಗಳನ್ನು ಕೊಟ್ಟಿದೆ ಎಂದು ಸೂದ್ ಹೇಳಿದರು.
ಈ ಸಮಾರಂಭದಲ್ಲಿ ಅನುಪ್ ರೂಬೆನ್ಸ್, ಸಂಗೀತ ನಿರ್ದೇಶಕಿ ಮತ್ತು ಗಾಯಕಿ ಸ್ಮಿತಾ, ಸೈಬರಾಬಾದ್ ಸಿಪಿ ಸಜ್ಜನರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.