ನವದೆಹಲಿ :ಭಾರತೀಯ ಭಾಷೆಗಳಲ್ಲಿ ಸುದ್ದಿ ನೋಡಲು ಯೂಟ್ಯೂಬ್ ಅತ್ಯಂತ ಜನಪ್ರಿಯ ಪ್ಲಾಟ್ಫಾರ್ಮ್ ಆಗಿ ಹೊರಹೊಮ್ಮಿದೆ ಎಂದು ಗುರುವಾರ ಅಧ್ಯಯನಾ ವರದಿಯೊಂದು ಹೇಳಿದೆ. ಸುದ್ದಿ ನೋಡಲು ಬಯಸುವವರ ಪೈಕಿ ಶೇಕಡಾ 93 ರಷ್ಟು ಜನ ಯೂಟ್ಯೂಬ್ ನೋಡುತ್ತಾರೆ ಎಂದು ವರದಿ ತಿಳಿಸಿದೆ. ದೇಶದಲ್ಲಿನ ಆನ್‌ಲೈನ್ ಭಾರತೀಯ ಭಾಷಾ ಸುದ್ದಿ ಗ್ರಾಹಕರ ವಿಭಿನ್ನ ಸುದ್ದಿ ವಿಷಯ ಬಳಕೆಯ ಆದ್ಯತೆಗಳು ಮತ್ತು ನಡವಳಿಕೆಗಳ ಬಗ್ಗೆ, ಮಾರ್ಕೆಟಿಂಗ್ ಡೇಟಾ ಮತ್ತು ಅನಲಿಟಿಕ್ಸ್ ಸಂಸ್ಥೆಯಾಗಿರುವ ಕಾಂಟಾರ್ ಇದು ಗೂಗಲ್ ನ್ಯೂಸ್ ಇನಿಶಿಯೇಟಿವ್ ಸಹಯೋಗದಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದು ಬಂದಿದೆ.
ಆನ್ಲೈನ್ ಮೂಲಕ ಸುದ್ದಿ ನೋಡಲು ಭಾರತೀಯ ಗ್ರಾಹಕನೊಬ್ಬ ಸರಾಸರಿ 5.05 ಡಿಜಿಟಲ್ ಪ್ಲಾಟ್ಪಾರ್ಮ್ಗಳನ್ನು ಬಳಸುತ್ತಾನೆ. ಇದರಲ್ಲಿ ಯೂಟ್ಯೂಬ್ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸೋಷಿಯಲ್ ಮೀಡಿಯಾ (ಶೇ 88) ಮತ್ತು ಚಾಟ್ ಆ್ಯಪ್ಗಳು (ಶೇ 82) ಇವೆ. ಇನ್ನು ಶೇ 45 ರಷ್ಟು ಜನ ನೇರವಾಗಿ ನ್ಯೂಸ್ ಪಬ್ಲಿಷರ್ಗಳ ವೆಬ್ಸೈಟ್ ಅಥವಾ ಆ್ಯಪ್ಗಳನ್ನು ತೆರೆದು ಸುದ್ದಿ ಓದುತ್ತಾರೆ ಅಥವಾ ನೋಡುತ್ತಾರೆ ಎಂದು ವರದಿ ತಿಳಿಸಿದೆ. ಸುದ್ದಿ ಮನೆಗಳು ತಾವು ಪ್ರಕಟಿಸುವ ಸುದ್ದಿಗಳನ್ನು ಪ್ರಾಮುಖ್ಯತೆಯ ಅನುಸಾರ ಪ್ರಕಟಿಸಲು ಮತ್ತು ವಿವಿಧ ಭಾರತೀಯ ಭಾಷೆಗಳ ಬಳಕೆದಾರರಿಗೆ ಹೊಂದುವಂತೆ ಯಾವ ರೀತಿಯಲ್ಲಿ ಕಂಟೆಂಟ್ ತಯಾರಿಸಬೇಕು ಎಂದು ಸಹಾಯ ಮಾಡಲು ಈ ವರದಿ ತಯಾರಿಸಲಾಗಿದೆ.
ಭಾರತದ ಡಿಜಿಟಲ್ ಸುದ್ದಿ ಬಳಕೆದಾರರು ತೀರಾ ವೈವಿಧ್ಯಮಯ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಗ್ರಾಹಕರಾಗಿದ್ದಾರೆ. ಭಾಷೆ ಬದಲಾದಂತೆ ಗ್ರಾಹಕರ ಸುದ್ದಿ ಆದ್ಯತೆಗಳೂ ಬದಲಾಗುತ್ತವೆ. ಉದಾಹರಣೆಗೆ ನೋಡುವುದಾದರೆ - ಸಾಮಾನ್ಯವಾಗಿ ಕ್ರೈಮ್, ರಾಷ್ಟ್ರೀಯ ಅಥವಾ ರಾಜ್ಯ ಅಥವಾ ನಗರಗಳ ಹೆಡ್ಲೈನ್ಸ್ ಇವು ಪ್ರಮುಖವಾಗಿ ನೋಡಲಾಗುವ ಸುದ್ದಿ ವಿಭಾಗಗಳಾಗಿವೆ. ಆದರೆ ಮಲಯಾಳಂ ಸುದ್ದಿ ನೋಡುಗರು ಅಥವಾ ಓದುಗರು ಅಂತಾರಾಷ್ಟ್ರೀಯ ಸುದ್ದಿಗಳು ಹಾಗೂ ಶಿಕ್ಷಣದ ಮಾಹಿತಿಗಾಗಿ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗೆಯೇ ಬಂಗಾಳಿ ಓದುಗರು ಕ್ರೀಡಾ ಸುದ್ದಿಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ.