ಕರ್ನಾಟಕ

karnataka

ETV Bharat / science-and-technology

ವಿಟಮಿನ್ ಡಿ, ಒಮೆಗಾ-3, ವ್ಯಾಯಾಮದಿಂದ ಕ್ಯಾನ್ಸರ್ ಅಪಾಯ ಕಡಿಮೆ: ಅಧ್ಯಯನ

ಪ್ರಸ್ತುತ ಮಧ್ಯವಯಸ್ಕ ಮತ್ತು ಹಿರಿಯರಲ್ಲಿ ಕ್ಯಾನ್ಸರ್ ತಡೆಗಟ್ಟುವುದು ಎಂದರೆ ಸ್ಕ್ರೀನಿಂಗ್ ಅಥವಾ ವ್ಯಾಕ್ಸಿನೇಷನ್ ಎಂದೇ ಭಾವಿಸಲಾಗುತ್ತದೆ. ಆದರೆ ವಿಟಮಿನ್ ಡಿ, ಒಮೆಗಾ-3, ವ್ಯಾಯಾಮದಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ಹೇಳಿದೆ.

Vitamin-D, Omega-3, exercise can reduce cancer risk by 61%: Study
ವಿಟಮಿನ್ ಡಿ, ಒಮೆಗಾ-3, ವ್ಯಾಯಾಮದಿಂದ ಕ್ಯಾನ್ಸರ್ ಅಪಾಯ ಕಡಿಮೆ: ಅಧ್ಯಯನ

By

Published : Apr 26, 2022, 6:19 PM IST

ಕ್ಯಾನ್ಸರ್ ಕ್ಷಿಪ್ರವಾಗಿ ವ್ಯಾಪಿಸುತ್ತಿರುವ ಮಾರಕ ರೋಗ. ಹಲವು ವಿಧಗಳ ಕ್ಯಾನ್ಸರ್​ ಇದ್ದು, ಅವುಗಳನ್ನು ತಡೆಯಲು ಅನೇಕ ಚಿಕಿತ್ಸಾ ಕ್ರಮಗಳೂ ಕೂಡಾ ಅಸ್ತಿತ್ವದಲ್ಲಿವೆ. ಆದರೆ ವಿಟಮಿನ್ ಡಿ, ಒಮೇಗಾ-3 ಮತ್ತು ವ್ಯಾಯಾಮ ಕ್ಯಾನ್ಸರ್ ರೋಗವನ್ನು ಯಶಸ್ವಿಯಾಗಿ ತಡೆಯಬಲ್ಲದು ಎಂದು ಫ್ರಾಂಟಿಯರ್ಸ್ ಆಫ್ ಏಜಿಂಗ್ ಎಂಬ ವಿಜ್ಞಾನ ಸಂಶೋಧನಾ ಜರ್ನಲ್​ನಲ್ಲಿ ಪ್ರಕಟಿತವಾದ ಅಧ್ಯಯನವೊಂದರಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ದೇಹದ ಅಂಗಾಂಶಗಳು ಮತ್ತು ಜೀವಕೋಶಗಳಲ್ಲಿ ಕಾಣಿಸಿಕೊಂಡು ನಂತರ ದೇಹದ ಇತರ ಭಾಗಗಳಿಗೆ ವ್ಯಾಪಿಸುವ ಕ್ಯಾನ್ಸರ್​ ಮೇಲೆ ವಿಟಮಿನ್ ಡಿ, ಒಮೇಗಾ-3 ಮತ್ತು ವ್ಯಾಯಾಮಗಳು ಅತಿ ಹೆಚ್ಚಿನ ಪ್ರಭಾವ ಬೀರಬಲ್ಲವು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ವಿಟಮಿನ್ ಡಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಅದರ ಜೊತೆಗೆ ಒಮೆಗಾ-3 ಸಾಮಾನ್ಯ ಕೋಶಗಳನ್ನು ಕ್ಯಾನ್ಸರ್ ಕೋಶಗಳಾಗುವುದನ್ನು ತಡೆಯುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಆದರೆ ಪ್ರಸ್ತುತ ಮಧ್ಯವಯಸ್ಕ ಮತ್ತು ಹಿರಿಯರಲ್ಲಿ ಕ್ಯಾನ್ಸರ್ ತಡೆಗಟ್ಟುವುದು ಎಂದರೆ ಸ್ಕ್ರೀನಿಂಗ್ ಅಥವಾ ವ್ಯಾಕ್ಸಿನೇಷನ್ ಎಂದೇ ಭಾವಿಸಲಾಗುತ್ತದೆ ಎಂದು ಸ್ವಿಟ್ಜರ್ಲೆಂಡ್‌ನ ಯೂನಿವರ್ಸಿಟಿ ಹಾಸ್ಪಿಟಲ್ ಜ್ಯೂರಿಚ್‌ನ ಡಾ.ಹೈಕ್ ಬಿಸ್ಚಫ್-ಫೆರಾರಿ ಕಳವಳ ವ್ಯಕ್ತಪಡಿಸಿದ್ದು, ಸ್ಕ್ರೀನಿಂಗ್ ಅಥವಾ ವ್ಯಾಕ್ಸಿನೇಷನ್​ನಿಂದ ಕ್ಯಾನ್ಸರ್ ತಡೆಯಬಹುದು ಎಂಬ ಭಾವನೆಯಿಂದ ಹೊರಬರಬೇಕು ಎಂದು ಸೂಚಿಸಿದ್ದಾರೆ.

ವಿಟಮಿನ್ ಡಿ, ಒಮೇಗಾ-3 ಮತ್ತು ವ್ಯಾಯಾಮದ ಮೂಲದ ಕ್ಯಾನ್ಸರ್​​ನ ರಿಸ್ಕ್ ಅನ್ನು ಕಡಿಮೆ ಮಾಡಬಹುದು ಎಂದು ಈಗಾಗಲೇ ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಈ ಮೂರು ಸರಳ ಮಾರ್ಗಗಳು ಒಂದೊಂದೇ ಅಥವಾ ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲವು ಎಂದು ವೈದ್ಯಕೀಯ ಅಧ್ಯಯನಗಳು ಹೇಳಿವೆ. ಬಿಸ್ಚಫ್-ಫೆರಾರಿ ಮತ್ತು ಅವರ ಸಹೋದ್ಯೋಗಿಗಳು ದಿನವೂ ವಿಟಮಿನ್ ಡಿ3, ಒಮೆಗಾ-3 ಮತ್ತು ವ್ಯಾಯಾಮದ ಮೂಲಕ ಕ್ಯಾನ್ಸರ್​​ ಮೇಲೆ ಉಂಟಾಗುವ ಪರಿಣಾಮವನ್ನು ಪರೀಕ್ಷೆ ಮಾಡಿದ್ದಾರೆ. ಇದಕ್ಕಾಗಿ 70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರನ್ನು ಬಳಸಿಕೊಳ್ಳಲಾಗಿತ್ತು. ಸ್ವಿಟ್ಜರ್ಲೆಂಡ್, ಫ್ರಾನ್ಸ್, ಜರ್ಮನಿ, ಆಸ್ಟ್ರಿಯಾ ಮತ್ತು ಪೋರ್ಚುಗಲ್‌ನಲ್ಲಿ ನಡೆದ ಮೂರು ವರ್ಷಗಳ ಪ್ರಯೋಗದಲ್ಲಿ 2,157 ಮಂದಿ ಭಾಗವಹಿಸಿದ್ದರು.

ಈ ಪ್ರಯೋಗದ ಮೂಲಕ ವಿಟಮಿನ್ ಡಿ3, ಒಮೆಗಾ -3 ಮತ್ತು ವ್ಯಾಯಾಮಗಳು ಹೆಚ್ಚು ಮಾರಕವಾಗಿ ಕ್ಯಾನ್ಸರ್ ಮೇಲೆ ಪರಿಣಾಮ ಬೀರಬಲ್ಲವು ಎಂದು ಫಲಿತಾಂಶಗಳು ಹೇಳಿವೆ ಎಂದು ಬಿಸ್ಚಫ್-ಫೆರಾರಿ ಹೇಳಿದರು. ಮೂರೂ ಅಂಶಗಳಲ್ಲಿ ಪ್ರತಿಯೊಂದೂ ಒಂದು ಸಣ್ಣ ವೈಯಕ್ತಿಕ ಪ್ರಯೋಜನವನ್ನು ಹೊಂದಿತ್ತು. ಎಲ್ಲಾ ಮೂರು ಅಂಶಗಳನ್ನು ಒಟ್ಟುಗೂಡಿಸಿದಾಗ ಪ್ರಯೋಜನ ಹೆಚ್ಚಾಗಿತ್ತು. ಈ ಮೂರೂ ಅಂಶಗಳ ಒಟ್ಟಾಗಿ ಪ್ರಯೋಗಿಸಿದರೆ, ಕ್ಯಾನ್ಸರ್ ಅಪಾಯ ಶೇಕಡಾ 61ರಷ್ಟು ಕಡಿಮೆಯಾಗಿತ್ತು. ನಮ್ಮ ಫಲಿತಾಂಶಗಳು ಸಕಾರಾತ್ಮಕವಾಗಿದ್ದರೂ, ಪ್ರಯೋಗ ಪುನರಾವರ್ತನೆ ಆಗಬೇಕಾದ ಅಗತ್ಯವಿದೆ. ಕ್ಯಾನ್ಸರ್​​ನ ಹೊರೆಯನ್ನು ಕಡಿಮೆ ಮಾಡಲು ಈ ಮೂರು ಅಂಶಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು ಎಂದು ಬಿಸ್ಚಫ್-ಫೆರಾರಿ ಹೇಳಿದ್ದು, ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಕೊರೊನಾ 4ನೇ ಅಲೆ ವೇಳೆ ಮಕ್ಕಳ ಬಗ್ಗೆ ಎಚ್ಚರವಹಿಸಿ: ವೈರಸ್‌ ತಡೆಗೆ ಲಸಿಕೆಯೇ ರಾಮಬಾಣ

ABOUT THE AUTHOR

...view details