ಸ್ಯಾನ್ ಫ್ರಾನ್ಸಿಸ್ಕೋ : ತನ್ನ ಸೋರ್ಸ್ ಕೋಡ್ನ ಕೆಲ ಭಾಗಗಳು ಆನ್‌ಲೈನ್ ಪೋರ್ಟಲ್ ಆಗಿರುವ ಗಿಟ್‌ಹಬ್‌ನಲ್ಲಿ ಸೋರಿಕೆಯಾಗಿವೆ ಎಂದು ಒಪ್ಪಿಕೊಂಡಿದೆ ಟ್ವಿಟರ್ ಒಪ್ಪಿಕೊಂಡಿದೆ. ಗಿಟ್ ಹಬ್ (GitHub) ಇದು ಓಪನ್ ಸೋರ್ಸ್ ಕೋಡಿಂಗ್ ಹಂಚಿಕೊಳ್ಳುವ ಪ್ಲಾಟ್ಫಾರ್ಮ್ ಆಗಿದೆ. ತನ್ನ ಸೋರ್ಸ್ ಕೋಡ್ ಸೋರಿಕೆ ಮಾಡಿದ್ದಕ್ಕೆ ಕಾರಣ ಕೇಳಿ ಕಾಪಿರೈಟ್ ಉಲ್ಲಂಘನೆಯಡಿ ಗಿಟ್ಹಬ್ಗೆ ನೋಟಿಸ್ ಕಳುಹಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.
ಈ ಕುರಿತು ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ನ ನಾರ್ದರ್ನ್ ಡಿಸ್ಟ್ರಿಕ್ಟ್ ಆಫ್ ಕ್ಯಾಲಿಫೋರ್ನಿಯಾ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಟ್ವಿಟರ್, ಯಾರು ಸೋರ್ಸ್ ಕೋಡ್ ಅನ್ನು ಸೋರಿಕೆ ಮಾಡಿದ್ದಾರೆ ಹಾಗೂ ಯಾರ್ಯಾರು ಅದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಗಿಟ್ ಹಬ್ಗೆ ಆದೇಶಿಸಬೇಕೆಂದು ಕೋರಿದೆ. ಸದ್ಯ ಗಿಟ್ ಹಬ್ ಕೋಡ್ ಅನ್ನು ತೆಗೆದು ಹಾಕಿದ್ದು, ಎಷ್ಟು ಕಾಲದವರೆಗೆ ಕೋಡ್ ಲಭ್ಯವಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ.
ಟ್ವಿಟರ್ ನಿರ್ವಹಣೆ ವಿಚಾರದಲ್ಲಿ ಅದರ ಸಿಇಓ ಎಲೋನ್ ಮಸ್ಕ್ ಈಗಾಗಲೇ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರ ಮಧ್ಯೆ ಸೋರ್ಸ್ ಕೋಡ್ ಸೋರಿಕೆಯಾಗಿರುವುದು ಅವರಿಗೆ ಮತ್ತೊಂದು ಬಿಕ್ಕಟ್ಟು ತಂದಿಟ್ಟಿದೆ. ತಂತ್ರಜ್ಞಾನ ಕಂಪನಿಗಳು ಸಾಮಾನ್ಯವಾಗಿ ತಮ್ಮ ಸೋರ್ಸ್ ಕೋಡ್ ಅನ್ನು ತುಂಬಾ ರಹಸ್ಯವಾಗಿ ಇರಿಸಿಕೊಳ್ಳುತ್ತವೆ. ತಮ್ಮ ಪ್ರತಿಸ್ಪರ್ಧಿಗಳಿಗೆ ಸೋರ್ಸ್ ಕೋಡ್ ಸಿಕ್ಕಲ್ಲಿ ಅದರಿಂದ ಇಡೀ ಸಾಫ್ಟವೇರ್ಗೆ ಭದ್ರತಾ ಆತಂಕ ಎದುರಾಗಬಹುದು. ಹೀಗಾಗಿ ಟ್ವಿಟರ್ ಸೋರ್ಸ್ ಕೋಡ್ ಸೋರಿಕೆಯಾಗಿರುವುದು ಗಂಭೀರ ವಿಷಯವಾಗಿದೆ.
ಟ್ವಿಟರ್ ಸೋರ್ಸ್ ಕೋಡ್ ಸೋರಿಕೆಯಾದ ಬಗ್ಗೆ ಮಸ್ಕ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವೀಟ್ ಗಳನ್ನು ರೆಕಮೆಂಡ್ (ಶಿಫಾರಸು) ಮಾಡುವ ಟ್ವಿಟರ್ನ ಎಲ್ಲ ಸೋರ್ಸ್ ಕೋಡ್ ಅನ್ನು ಮಾರ್ಚ್ 31 ರಂದು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಸಿಇಓ ಎಲೋನ್ ಮಸ್ಕ್ ಇದೇ ತಿಂಗಳು ಘೋಷಿಸಿದ್ದು ಗಮನಾರ್ಹ. ಮಾರ್ಚ್ 31 ರಂದು ಟ್ವೀಟ್‌ಗಳನ್ನು ಶಿಫಾರಸು ಮಾಡಲು ಬಳಸುವ ಎಲ್ಲಾ ಕೋಡ್ ಗಳನ್ನು ಟ್ವಿಟರ್ ಓಪನ್ ಸೋರ್ಸ್ ಮಾಡಲಿದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದರು. ನಮ್ಮ 'ಅಲ್ಗಾರಿದಮ್' ತುಂಬಾ ಸಂಕೀರ್ಣವಾಗಿದೆ ಮತ್ತು ಆಂತರಿಕವಾಗಿ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ. ಜನರಿಗೆ ಇದರಲ್ಲಿ ಅನೇಕ ಸಣ್ಣ ವಿಷಯಗಳು ಕಾಣಿಸಬಹುದು. ಆದರೆ ಸಮಸ್ಯೆಗಳು ಕಂಡು ಬಂದ ತಕ್ಷಣ ನಾವು ಅವನ್ನು ಸರಿಪಡಿಸುತ್ತೇವೆ ಎಂದು ಅವರು ಟ್ವೀಟ್ನಲ್ಲಿ ಬರೆದಿದ್ದರು.
ಹೆಚ್ಚು ಉಪಯುಕ್ತವಾದ ಟ್ವೀಟ್‌ಗಳನ್ನು ತೋರಿಸಲು ಕಂಪನಿಯು ಸುಲಭವಾದ ಕಾರ್ಯವಿಧಾನವನ್ನು ತಯಾರಿಸುತ್ತಿದೆ ಹಾಗೂ ಇದು ಓಪನ್ ಸೋರ್ಸ್ ಆಗಿರಲಿದೆ. ಕೋಡಿಂಗ್ನಲ್ಲಿ ಪಾರದರ್ಶಕತೆ ತರುವುದು ನಮಗೆ ಹಿಂಜರಿಕೆಯ ಸಂಗತಿಯಾಗಿರಲಿದೆ. ಆದರೆ ಅದು ಉತ್ತಮ ಟ್ವೀಟ್‌ಗಳನ್ನು ಶಿಫಾರಸು ಮಾಡುವಂತಿರಬೇಕು. ನಾವು ಈ ಮೂಲಕ ಬಳಕೆದಾರರ ವಿಶ್ವಾಸವನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದರು. ಸಾರ್ವಜನಿಕರ ಅಭಿಪ್ರಾಯಗಳನ್ನು ಬದಲಾಯಿಸುವ ಪ್ರಯತ್ನಗಳನ್ನು ಕಂಡು ಹಿಡಿಯಲು ಟ್ವಿಟರ್ ಮುಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯ ಪಡೆಯಲಿದೆ ಎಂದು ಮಸ್ಕ್ ತಿಳಿಸಿದ್ದರು.
ಇದನ್ನೂ ಓದಿ : ಏಪ್ರಿಲ್ 1ರಿಂದ ಲೆಗಸಿ ಟ್ವಿಟರ್ ಬ್ಲೂ ಬ್ಯಾಡ್ಜ್ ಇರಲ್ಲ: ಎಲಾನ್ ಮಸ್ಕ್