ಲಂಡನ್: ಜನರ ಧ್ವನಿಯನ್ನು ಕೇಳಿಸಿಕೊಂಡು ಕೋವಿಡ್ - 19 ಸೋಂಕು ಪತ್ತೆ ಮಾಡುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ಸ್ಮಾರ್ಟ್ ಫೋನ್ ಆ್ಯಪ್ ಒಂದನ್ನು ತಯಾರಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹಲವಾರು ಆ್ಯಂಟಿಜೆನ್ ಟೆಸ್ಟ್ಗಳಿಗಿಂತ ಇದು ನಿಖರವಾಗಿದೆ ಮತ್ತು ಅಗ್ಗದರದಲ್ಲಿ ಸುಲಭವಾಗಿ ಮತ್ತು ಶೀಘ್ರವಾಗಿ ಕೋವಿಡ್-19 ಪತ್ತೆ ಮಾಡಬಹುದು. ಹೀಗಾಗಿ ಪಿಸಿಆರ್ ಲಭ್ಯವಿಲ್ಲದ ಅಥವಾ ಪಿಸಿಆರ್ ದುಬಾರಿಯಾಗಿರುವ ರಾಷ್ಟ್ರಗಳಲ್ಲಿ ಬಳಸಲು ಇದು ತುಂಬಾ ಅನುಕೂಲವಾಗಿದೆ ಎಂದು ತಿಳಿಸಲಾಗಿದೆ.
ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಕೋವಿಡ್ ಪತ್ತೆ:ಸುಲಭವಾಗಿ ಧ್ವನಿ ರೆಕಾರ್ಡ್ ಮಾಡಿ, ಆರ್ಟಿಫಿಶಿಯಲ್ ಅಲ್ಗೊರಿದಮ್ ಟ್ಯೂನಿಂಗ್ ಮೂಲಕ ನಿಖರವಾಗಿ ಯಾರಿಗೆಲ್ಲ ಕೋವಿಡ್-19 ಸೋಂಕು ತಗುಲಿದೆ ಎಂಬುದನ್ನು ಪತ್ತೆ ಮಾಡಬಹುದು ಎಂದು ವಾಫಾ ಅಲ್ಬಾವಿ ಹೇಳಿದ್ದಾರೆ. ಇವರು ನೆದರ್ಲೆಂಡ್ನ ಮ್ಯಾಸ್ಟ್ರಿಚ್ ಯುನಿವರ್ಸಿಟಿಯ ಇನ್ ಸ್ಟಿಟ್ಯೂಟ್ ಆಫ್ ಡೇಟಾ ಸೈನ್ಸ್ ನಲ್ಲಿ ಸಂಶೋಧಕರಾಗಿದ್ದಾರೆ.
ಈ ಆ್ಯಪ್ ರಿಮೋಟ್, ವರ್ಚುಯಲ್ ಟೆಸ್ಟಿಂಗ್ ಮೂಲಕ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಕೋವಿಡ್ ಪತ್ತೆ ಮಾಡುತ್ತದೆ. ಬೃಹತ್ ಸಮಾರಂಭಗಳ ಪ್ರವೇಶ ದ್ವಾರದಲ್ಲಿ ಇದನ್ನು ಬಳಸಬಹುದು. ತುಂಬಾ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ಇದರ ಮೂಲಕ ಕೋವಿಡ್ ಪರೀಕ್ಷೆಗೆ ಒಳಪಡಿಸಬಹುದು ಎಂದು ಸ್ಪೇನ್ನ ಬಾರ್ಸಿಲೋನಾದಲ್ಲಿರುವ ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ ಇಂಟರನ್ಯಾಷನಲ್ ಹೇಳಿದೆ.
ಕೋವಿಡ್-19 ಸೋಂಕು ಸಾಮಾನ್ಯವಾಗಿ ಮೇಲ್ಭಾಗದ ಉಸಿರಾಟದ ಟ್ರ್ಯಾಕ್ ಮತ್ತು ಧ್ವನಿ ತಂತುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ಧ್ವನಿಯಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಕೋವಿಡ್-19 ಅನ್ನು ಪತ್ತೆಹಚ್ಚಲು ಧ್ವನಿಗಳನ್ನು ವಿಶ್ಲೇಷಿಸಲು AI ಅನ್ನು ಬಳಸಲು ಸಾಧ್ಯವೇ ಎಂದು ಅಲ್ಬಾವಿ ಮತ್ತು ಅವರ ಸಹೋದ್ಯೋಗಿಗಳು ತನಿಖೆ ಮಾಡಲು ನಿರ್ಧರಿಸಿದರು.