ರೋಬೋಟ್‌ಗಳು ಮಾನವರು ಮಾಡಲಾಗದ ಅತ್ಯಂತ ಕಷ್ಟದ ಕೆಲಸಗಳನ್ನು ನಿರ್ವಹಿಸುತ್ತವೆ. ಭವಿಷ್ಯದಲ್ಲಿ ರೋಬೋಟ್‌ಗಳು ನಮ್ಮ ದೇಶದ ಗಡಿಗಳಲ್ಲಿ ಗಸ್ತು ತಿರುಗಲಿವೆ. ಹೈದರಾಬಾದ್ ಮೂಲದ ಆಲ್ ಇಂಡಿಯಾ ರೊಬೊಟಿಕ್ಸ್ ಅಸೋಸಿಯೇಷನ್ (ಎಐಆರ್‌ಎ ಅಥವಾ ಐರಾ) ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ರಕ್ಷಣಾ ರೋಬೋಟ್‌ಗಳ ಉತ್ಪಾದನೆಯನ್ನು ಆರಂಭಿಸಿದೆ. ಆಗಸ್ಟ್ ವೇಳೆಗೆ ರಕ್ಷಣಾ ರೋಬೋಟ್ ಅನ್ನು ಸಿದ್ಧಪಡಿಸುವ ಗುರಿಯನ್ನು ನಮ್ಮ ಸಂಸ್ಥೆ ಹೊಂದಿದೆ ಎಂದು ಐರಾ ಅಧ್ಯಕ್ಷ ಪಿಎಸ್‌ವಿ ಕಿಶನ್ ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಮ್ಮ ದೇಶದ ಸೇನೆಯಲ್ಲಿ ರೋಬೋಟ್ಗಳಿವೆಯೇ?:ಚೀನಾ ನಮ್ಮ ದೇಶದ ಗಡಿಯಲ್ಲಿ ರೋಬೋಟ್‌ಗಳನ್ನು ನಿಯೋಜಿಸಿದೆ ಎಂಬ ವರದಿಗಳು ಬಂದಿವೆ. ಇಸ್ರೇಲ್ ಮತ್ತು ಅಮೆರಿಕ ಕೂಡ ಈ ಮೊದಲಿನಿಂದಲೂ ಸೇನೆಯಲ್ಲಿ ರೋಬೋಟ್‌ಗಳನ್ನು ನೇಮಿಸಿವೆ. ನಮ್ಮ ರಕ್ಷಣಾ ಸಂಸ್ಥೆಗಳಲ್ಲಿಯೂ ರೋಬೋಟ್‌ಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಸೇನೆಯಲ್ಲಿ ಇದರ ಬಳಕೆಯ ಬಗ್ಗೆ ಸರ್ಕಾರ ಇನ್ನೂ ಹೇಳಿಕೆ ನೀಡಿಲ್ಲ.
ಐರಾ ರಕ್ಷಣಾ ವಿನ್ಯಾಸದ ರೋಬೋಟ್ ಹೇಗಿರಲಿದೆ?:ನಮ್ಮ ಸಂಸ್ಥೆ ರೂಪಿಸುತ್ತಿರುವ ರೊಬೋಟ್ ಸೇನಾ ಟ್ಯಾಂಕರ್‌ನಂತೆಯೇ 4.5 ಅಡಿ ಎತ್ತರವಿರುತ್ತದೆ. ಹಿಮ, ಬೆಟ್ಟಗಳು, ಮರುಭೂಮಿಯಂತಹ ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿಯೂ ಕೆಲಸ ಮಾಡಲು ಅನುವಾಗುವಂತೆ ರೋಬೋಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ. ಆ ರೋಬೋಗಳು ಗಸ್ತು ತಿರುಗುತ್ತವೆ. ಯಾವುದೇ ಬಾಂಬ್ಗಳಿದ್ದರೆ, ಅವುಗಳನ್ನು ಪತ್ತೆ ಹಚ್ಚುತ್ತವೆ.
ನಿರ್ಬಂಧಿತ ಪ್ರದೇಶಗಳಿಗೆ ಯಾರಾದರೂ ಪ್ರವೇಶಿಸಿದರೆ ಗುಂಡಿನ ದಾಳಿಯನ್ನು ನಡೆಸುವಂತೆಯೂ ಈ ರೋಬೋಗಳನ್ನು ವಿನ್ಯಾಸ ಮಾಡುತ್ತಿದ್ದೇವೆ. ಇವು ಬುಲೆಟ್ ಪ್ರೂಫ್ ಆಗಿದ್ದು, ಇವುಗಳು ಹಾರಿಸುವ ಗುಂಡು ಔಷಧದಿಂದ ಕೂಡಿದ್ದು, ಗುಂಡು ಹೊಕ್ಕಿದ ವ್ಯಕ್ತಿ ಕುಸಿದು ಬೀಳುತ್ತಾನೆ. ಈ ಹಿಂದೆ ಪೊಲೀಸ್ ರೋಬೋಟ್ ಮಾಡಿದ ಅನುಭವವಿದೆ. ನಿವೃತ್ತ ಸೇನಾ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ, ಡಿಫೆನ್ಸ್ ರೋಬೋಟ್ ಯೋಜನೆಯನ್ನು ಘೋಷಿಸಲಾಗಿದೆ. ಮಾದರಿ ಸಿದ್ಧವಾದ ನಂತರ ನಾವು ಮಿಲಿಟರಿ ಅಧಿಕಾರಿಗಳ ಮುಂದೆ ರೋಬೋಟ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತೇವೆ. ಅವರ ಸೂಚನೆಗಳೊಂದಿಗೆ ನಾವು ಅಂತಿಮ ರೋಬೋಟ್ ವಿನ್ಯಾಸವನ್ನು ಅಂತಿಮಗೊಳಿಸುತ್ತೇವೆ.