ನವದೆಹಲಿ:ನಕ್ಷತ್ರಗಳಿಗೂ ಹುಟ್ಟು- ಸಾವು ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹುಟ್ಟು ಸಾವು ಇದ್ದ ಮೇಲೆ ನಕ್ಷತ್ರಗಳಲ್ಲೂ ಬಾಲ್ಯಾವಸ್ಥೆ, ಯೌವ್ವನಾವಸ್ಥೆ ಇರುತ್ತದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಅತ್ಯಂತ ಅಪರೂಪದ ಯುವ ನಕ್ಷತ್ರಗಳ ಸಮೂಹವನ್ನು ಗುರುತಿಸಿದ್ದಾರೆ. ಗುರುತ್ವಾಕರ್ಷಣೆಯ ಪ್ರಭಾವದ ಅಡಿಯಲ್ಲಿ ಬಾಹ್ಯಾಕಾಶದಲ್ಲಿನ ವಸ್ತುಗಳನ್ನು ಸೆಳೆಯುವ ಮೂಲಕ ಮತ್ತು ಒಂದು ನಕ್ಷತ್ರ ಮತ್ತೊಂದು ನಕ್ಷತ್ರದೊಂದಿಗೆ ಬೆರೆತುಕೊಳ್ಳುವ ಮುಖಾಂತರ ಈ ನಕ್ಷತ್ರಗಳು ದೊಡ್ಡದಾಗಿ ಬೆಳೆಯುತ್ತಿವೆ. ಈ ಅಪರೂಪದ ನಕ್ಷತ್ರಗಳು ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ವಿಜ್ಞಾನಗಳ ಆಸಕ್ತಿಯನ್ನು ಗಳಿಸಿವೆ. ಯುವ ನಕ್ಷತ್ರಗಳೆಂದೇ ಹೆಸರಾದ ಈ ನಕ್ಷತ್ರಗಳ ಅಧ್ಯಯನವನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ನಕ್ಷತ್ರಗಳು ಹೊಳೆಯಬೇಕೆಂದರೆ ಅಥವಾ ಶಾಖ ಶಕ್ತಿಯನ್ನು ಬಿಡುಗಡೆ ಮಾಡಬೇಕೆಂದರೆ, ಬೈಜಿಕ ಸಮ್ಮಿಲನ ಕ್ರಿಯೆ ನಡೆಯಬೇಕು. ಅಂದರೆ ನಕ್ಷತ್ರದಲ್ಲಿರುವ ಹೈಡ್ರೋಜನ್ ಮತ್ತು ಹೀಲಿಯಂ ಹೊತ್ತಿ ಉರಿಯಬೇಕು. ಆದರೆ ಈ ಯುವ ನಕ್ಷತ್ರಗಳಲ್ಲಿ ಡ್ಯುಟೇರಿಯಂ ಸಮ್ಮಿಲನ ಕ್ರಿಯೆ ಮತ್ತು ಗುರುತ್ವಾಕರ್ಷಣೆಯ ಸಂಕೋಚನದಿಂದ ಬೆಳಕು ಅಥವಾ ಶಾಖ ಬಿಡುಗಡೆಯಾಗುತ್ತದೆ. ನಕ್ಷತ್ರಗಳ ಮಧ್ಯದಲ್ಲಿ ಇನ್ನೂ ಹೈಡ್ರೋಜನ್ ಸಮ್ಮಿಲನ ಆರಂಭವಾಗಿಲ್ಲ. ಡ್ಯುಟೇರಿಯಂ ಸಮ್ಮಿಲನ ಕ್ರಿಯೆಯ ಮೂಲಕ ನಕ್ಷತ್ರ ಹೊಳೆಯುವುದು ಯಾವುದಾದರೋ ಒಂದು ನಕ್ಷತ್ರದ ಉಗಮದ ಮೊದಲ ಮತ್ತು ಪ್ರಮುಖ ಹಂತವಾಗಿದೆ. ಈ ನಕ್ಷತ್ರಗಳಲ್ಲಿ ಸುತ್ತಲೂ ಡಿಸ್ಕ್ ರೀತಿಯ ರಚನೆಯನ್ನು ಹೊಂದಿವೆ. ಈ ರಚನೆಗಳು ಕೆಲವು ವಸ್ತುಗಳನ್ನು ನಕ್ಷತ್ರದೊಳಗೆ ಸೇರಿಸುತ್ತವೆ. ಇದರಿಂದಾಗಿ ನಕ್ಷತ್ರಗಳು ದೊಡ್ಡದಾಗುತ್ತಿವೆ.
Gaia 20eae ಎಂಬ ನಕ್ಷತ್ರವನ್ನು ವಿಜ್ಞಾನಿಗಳು ಗುರ್ತಿಸಿದ್ದಾರೆ. ಈ ನಕ್ಷತ್ರ ಯುವ ನಕ್ಷತ್ರಗಳ ಸಮೂಹದಲ್ಲಿದೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್‌ಆರ್) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ವಿಜ್ಞಾನಿಗಳನ್ನು ಒಳಗೊಂಡಂತೆ ಆರ್ಯಭಟ್ಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್‌ನ (ಎಆರ್‌ಐಇಎಸ್) ಭಾರತೀಯ ಖಗೋಳಶಾಸ್ತ್ರಜ್ಞರು ಈ ನಕ್ಷತ್ರವನ್ನು ಸಂಶೋಧನೆ ಮಾಡಿದ್ದು, ಹೆಚ್ಚಿನ ಸಂಶೋಧನೆ ಕೈಗೊಂಡಿದ್ದಾರೆ. ಆರ್ಯಭಟ್ಟ ಸಂಶೋಧನಾ ಸಂಸ್ಥೆಯು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ.