ನವದೆಹಲಿ :2023 ರ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ 25.1 ಮಿಲಿಯನ್ ಧರಿಸಬಹುದಾದ ಸಾಧನಗಳು (wearable units) ಮಾರಾಟವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 80.9 ಶೇಕಡಾ ರಷ್ಟು ಬೆಳವಣಿಗೆಯಾಗಿದೆ. ಆದರೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಬೆಳವಣಿಗೆ ಸಮತಟ್ಟಾಗಿದೆ ಎಂದು ವರದಿಯು ತೋರಿಸಿದೆ.
ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್ ಪ್ರಕಾರ, ಸ್ಮಾರ್ಟ್ ವಾಚ್‌ಗಳ ಪಾಲು ಒಂದು ವರ್ಷದ ಹಿಂದೆ ಇದ್ದ ಶೇಕಡಾ 26.8 ದಿಂದ ಶೇಕಡಾ 41.4 ಏರಿಕೆಯಾಗಿದೆ ಮತ್ತು ಇಯರ್‌ವೇರ್ ವಿಭಾಗವು ಶೇಕಡಾ 48.5 ದಷ್ಟು ಉತ್ತಮ ಬೆಳವಣಿಗೆಯನ್ನು ಕಂಡಿದೆ. ಇಮ್ಯಾಜಿನ್ ಮಾರ್ಕೆಟಿಂಗ್ ಅಥವಾ ಬೋಟ್ (boAt) ಶೇಕಡಾ 25.6 ರಷ್ಟು ಪಾಲನ್ನು ಹೊಂದಿದ್ದು, ಶೇಕಡಾ 102.4 ರಷ್ಟು ಬೆಳವಣಿಗೆಯೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಒಟ್ಟಾರೆ ಧರಿಸಬಹುದಾದ ಸಾಧನಗಳ ವಿಭಾಗದಲ್ಲಿ ಮೊದಲನೇ ತ್ರೈಮಾಸಿಕದಲ್ಲಿ ಫೈರ್-ಬೋಲ್ಟ್ 12.4 ಶೇಕಡಾ ಪಾಲನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಇದು ಸ್ಮಾರ್ಟ್ ವಾಚ್ ವಿಭಾಗದಲ್ಲಿ 28.6 ಶೇಕಡಾ ಪಾಲು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 224.2 ರಷ್ಟು ಬೆಳವಣಿಗೆ ದಾಖಲಿಸಿದೆ. Nexxbase (ನಾಯ್ಸ್) ಒಟ್ಟಾರೆ ಧರಿಸಬಹುದಾದ ಸಾಧನಗಳ ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ವರ್ಷದಿಂದ ವರ್ಷಕ್ಕೆ 97.3 ಶೇಕಡಾ ಬೆಳವಣಿಗೆ ದಾಖಲಿಸಿದ್ದು, 11.9 ಶೇಕಡಾ ಮಾರುಕಟ್ಟೆ ಪಾಲನ್ನು ಹೊಮದಿದೆ. ಆದರೆ ಸ್ಮಾರ್ಟ್‌ವಾಚ್ ವಿಭಾಗದಲ್ಲಿ ನಾಯ್ಸ್ ಕಂಪನಿಯು ಎರಡನೇ ಸ್ಥಾನಕ್ಕೆ ಇಳಿದಿದೆ. ಇದು ಮಾರುಕಟ್ಟೆಯಲ್ಲಿ ಶೇಕಡಾ 21.6 ರಷ್ಟು ಪಾಲು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 157.6 ರಷ್ಟು ಬೆಳವಣಿಗೆ ದಾಖಲಿಸಿದೆ.