ಗುವಾಹಟಿ (ಅಸ್ಸೋಂ): ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗುವಾಹಟಿಯ ಸಂಶೋಧಕರು ನ್ಯಾನೊ ಕ್ಲೇ ಬಳಸಿ ಲಿಕ್ವಿಡ್ ಮಾರ್ಬಲ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ದೇಹದೊಳಗೆ ಔಷಧ ನೀಡಲು ಮತ್ತು ಕ್ಯಾಸ್ಕೇಡ್ ರಾಸಾಯನಿಕ ಪ್ರತಿಕ್ರಿಯೆಗಳ ಕೆಲಸಗಳಿಗಾಗಿ ಪೂರ್ವದಲ್ಲಿಯೇ ಪ್ರೋಗ್ರಾಮ್ ಮಾಡಬಹುದು. ನ್ಯಾನೊ ಕ್ಲೇಗಳು ಖನಿಜ ಸಿಲಿಕೇಟ್ಗಳ ಪದರು ಹೊಂದಿರುವ ನ್ಯಾನೊ ಪಾರ್ಟಿಕಲ್ಗಳಾಗಿವೆ.
ಸಾಮಾನ್ಯವಾಗಿ ರೋಗದ ಚಿಕಿತ್ಸೆಯಲ್ಲಿ ಮಾತ್ರೆಗಳು, ಕ್ಯಾಪ್ಸುಲ್ಗಳು, ಸಿರಪ್ಗಳು, ಮುಲಾಮುಗಳು ಮುಂತಾದುವುಗಳನ್ನು ಒಳಗೊಂಡಿರುತ್ತದೆ. ಮತ್ತೊಂದೆಡೆ ನಿಯಂತ್ರಿತ ಔಷಧ ಪೂರೈಕೆ ವ್ಯವಸ್ಥೆಯಲ್ಲಿ ನಿರ್ದಿಷ್ಟ ಜಾಗದಲ್ಲಿ ಅಪೇಕ್ಷಿತ ಅವಧಿಗೆ ಕ್ರಮೇಣವಾಗಿ ಅಗತ್ಯವಿರುವ ಪ್ರಮಾಣದ ಔಷಧವನ್ನು ತಲುಪಿಸುವ ಹೆಚ್ಚು ಪರಿಣಾಮಕಾರಿ ತಂತ್ರವಾಗಿದೆ. ಕರಗುವ ರೂಪದಲ್ಲಿ ಔಷಧಗಳ ಲೋಡ್ ಮತ್ತು ಬಿಡುಗಡೆ ಈ ತಂತ್ರಜ್ಞಾನದ ಮತ್ತೊಂದು ಪ್ರಮುಖ ಅಂಶವಾಗಿದೆ. 'ಟೈಮ್ ಬಾಂಬ್' ಮಾದರಿಯಲ್ಲಿ ಔಷಧ ಬಿಡುಗಡೆಯ ಪರಿಣಾಮವನ್ನು ಹೊಂದಲು ಮತ್ತು ಸ್ವಯಂಪ್ರೇರಿತ ರಾಸಾಯನಿಕ ಕ್ರಿಯೆಯನ್ನು ನಡೆಸಬಹುದಾದ ದ್ರವ ಮಾರ್ಬಲ್‌ಗಳನ್ನು IIT ಗುವಾಹಟಿಯ ತಂಡವು ವಿನ್ಯಾಸಗೊಳಿಸಿದೆ.
ಉದಾಹರಣೆಗೆ ನೋಡುವುದಾದರೆ ಬೆಳಕು, ತಾಪಮಾನ, ವಿದ್ಯುತ್ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಲಿಕ್ವಿಡ್ ಮಾರ್ಬಲ್ನಿಂದ ಔಷಧಗಳ ಬಿಡುಗಡೆಯನ್ನು ಈ ಮೊದಲೇ ಸಾಧಿಸಲಾಗಿದೆ. ಆದರೆ, ಸಮಯದ ಮುಂಚೆಯೇ ಪ್ರೋಗ್ರಾಮ್ ಮಾಡಲಾದ ಬಿಡುಗಡೆಯನ್ನು ಇನ್ನೂ ಸಾಧಿಸಲಾಗಿಲ್ಲ. ನಾವು ನೀರಿನ ಮೇಲೆ ತೇಲುವ ಲಿಕ್ವಿಡ್ ಮಾರ್ಬಲ್ನ ಜೀವಿತಾವಧಿಯನ್ನು ರಾಸಾಯನಿಕವಾಗಿ ಮಾರ್ಪಡಿಸಿದ್ದೇವೆ ಎಂದು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ ಮತ್ತು ನ್ಯಾನೊತಂತ್ರಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಉತ್ತಮ್ ಮನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.