ಬ್ಲೆಚ್ಲೆ ಪಾರ್ಕ್ (ಇಂಗ್ಲೆಂಡ್): ಮೊದಲ ಅಂತರರಾಷ್ಟ್ರೀಯ ಕೃತಕ ಬುದ್ಧಿಮತ್ತೆ (ಎಐ) ಸುರಕ್ಷತಾ ಶೃಂಗಸಭೆ ಲಂಡನ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಕೃತಕ ಬುದ್ಧಿಮತ್ತೆಯಲ್ಲಿನ ಪ್ರಗತಿಯಿಂದ ಉಂಟಾದ ಸಂಭಾವ್ಯ ಅಪಾಯಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಯುಎಸ್ ಮತ್ತು ಚೀನಾ ಸೇರಿದಂತೆ 28 ರಾಷ್ಟ್ರಗಳ ಪ್ರತಿನಿಧಿಗಳು ಒಪ್ಪಿಕೊಂಡರು.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾತನಾಡಿ, "ಎಐ ತಂತ್ರಜ್ಞಾನವು ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರುವುದರ ಜೊತೆಗೆ ಹೊಸ ಅಪಾಯಗಳನ್ನೂ ತಂದೊಡ್ಡಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ದೀರ್ಘಾವಧಿಯ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಕೃತಕ ಬುದ್ಧಿಮತ್ತೆಯ ಅಪಾಯಗಳನ್ನು ಅರ್ಥಮಾಡಿಕೊಂಡು, ಸಮಸ್ಯೆ ನಿಭಾಯಿಸಲು 28 ದೇಶಗಳು ಪ್ರತಿಜ್ಞೆ ಮಾಡಿರುವುದು ಒಂದು ವಿಶೇಷ ಸಾಧನೆ" ಎಂದರು.
ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾತನಾಡಿ, ರಸಾಯನಿಕ ಅಥವಾ ಜೈವಿಕ ಅಸ್ತ್ರಗಳನ್ನು ಎಐ ತಂತ್ರಜ್ಞಾನ ಬಳಸಿ ಸುಲಭವಾಗಿ ನಿರ್ಮಿಸಬಹುದು. ಭಯೋತ್ಪಾದಕ ಸಂಘಟನೆಗಳೂ ಇದನ್ನು ಬಳಸುವ ಅಪಾಯವಿದೆ. ವಂಚನೆ, ಸೈಬರ್ ದಾಳಿಗೂ ಇದು ಬಳಕೆಯಾಗುವ ಸಾಧ್ಯತೆ ಇದೆ. ಎಐ ಈಗಾಗಲೇ ತರುತ್ತಿರುವ ರೂಪಾಂತರಗಳು ಮತ್ತು ಕಾನೂನಿನ ಮೂಲಕ ಟೆಕ್ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.
ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಸಹ ಎರಡು ದಿನಗಳ (ನಿನ್ನೆ ಮತ್ತು ಇಂದು) ಎಐ ಸುರಕ್ಷತಾ ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್‌ಗೆ ತೆರಳಿದ್ದಾರೆ. ಬ್ರಿಟನ್, ಅಮೆರಿಕ, ಫ್ರಾನ್ಸ್, ಇಂಡೋನೇಷ್ಯಾ, ಕೀನ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳ ಸಚಿವರು ಈ ಶೃಂಗದಲ್ಲಿ ಭಾಗವಹಿಸಿದ್ದಾರೆ.