ಹೈದರಾಬಾದ್:ಚಂದ್ರಚುಂಬನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತಿಮ ಸಿದ್ಧತೆ ಮಾಡಿಕೊಂಡಿದೆ. ಪೂರ್ವನಿಗದಿಯಂತೆ ಆಗಸ್ಟ್ 23 ರಂದು ಸಂಜೆ 6:04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಇದರ ಕಾರ್ಯಾಚರಣೆ ಸಂಜೆ 5:47 ನಿಮಿಷದಿಂದ ಆರಂಭವಾಗಲಿದೆ.
ನೇರಪ್ರಸಾರ ವೀಕ್ಷಿಸಿ: ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಮತ್ತು ಅದರಲ್ಲಿರುವ ಪ್ರಗ್ಯಾನ್ ರೋವರ್ನ ಆಂತರಿಕ ಪರೀಕ್ಷೆ ನಡೆಸುತ್ತಿದ್ದು, ನಿಯಮಿತ ತಪಾಸಣೆಯ ಮೂಲಕ ಸುಗಮ ನೌಕಾಯಾನ ಮುಂದುವರಿದಿದೆ. ಉಪಗ್ರಹದ ಪ್ರಮುಖ ಅಂಗ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (MOX) ಅತ್ಯುತ್ತಮ ಸ್ಥಿತಿಯಲ್ಲಿದೆ. ಲ್ಯಾಂಡಿಂಗ್ ಕಾರ್ಯಾಚರಣೆಯ ನೇರಪ್ರಸಾರ ಸಂಜೆ 5.20 ರಿಂದ ಪ್ರಾರಂಭವಾಗಲಿದೆ ಎಂದು ಇಸ್ರೋ ತನ್ನ ಸಾಮಾಜಿಕ ಜಾಲತಾಣ ಖಾತೆ 'ಎಕ್ಸ್'ನಲ್ಲಿ (ಹಿಂದಿನ ಟ್ವಿಟರ್) ಮಾಹಿತಿ ನೀಡಿದೆ.
ಲ್ಯಾಂಡರ್ಗೆ ಅಳವಡಿಸಲಾಗಿರುವ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮರಾ (ಎಲ್ಪಿಡಿಸಿ) ಆಗಸ್ಟ್ 19 ರಂದು ಸುಮಾರು 70 ಕಿ.ಮೀ ಎತ್ತರದಿಂದ ಚಂದ್ರನ ಮೇಲ್ಮೈ ಭಾಗವನ್ನು ಸೆರೆಹಿಡಿದು, ಅದರ ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು. ಈ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ ಸ್ಥಾನವನ್ನು (ಅಕ್ಷಾಂಶ ಮತ್ತು ರೇಖಾಂಶ) ನಿರ್ಧರಿಸುವಲ್ಲಿ ಸಹಾಯ ಮಾಡುತ್ತವೆ.
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ನೌಕೆಯು, 2019 ರ ಚಂದ್ರಯಾನ-2 ಮಿಷನ್ ಮುಂದುವರಿದ ಭಾಗ. ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಹತ್ತಿರಕ್ಕೆ ತೆರಳಿದ್ದು, ಕಕ್ಷೆ ಇಳಿಸುವ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದೆ. ನಾಳೆ ಸಂಜೆ ದಕ್ಷಿಣ ಧ್ರುವದ ನಿರ್ಧರಿತ ಜಾಗದಲ್ಲಿ ಇಳಿಯಲು ಸಿದ್ಧವಾಗಿದೆ. ಇದನ್ನು ಸಾಧಿಸಿದ್ದೇ ಆದಲ್ಲಿ ಉಪಗ್ರಹವೊಂದನ್ನು ದಕ್ಷಿಣ ಧ್ರುವಕ್ಕೆ ತಲುಪಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಲಿದೆ.