ನವದೆಹಲಿ: ಚಂದ್ರಯಾನ -3 ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ ವೃತ್ತಾಕಾರದ ಕಕ್ಷೆಯನ್ನುತಲುಪಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. "ಚಂದ್ರನ ಕಕ್ಷೆಯಲ್ಲಿ ವೃತ್ತಾಕಾರವಾಗಿ ಪರಿಭ್ರಮಿಸುವ ಹಂತ ಪ್ರಾರಂಭವಾಗಿದೆ. ಇಂದು ನಡೆಸಿದ ನಿಖರವಾದ ಕಕ್ಷಾವರೋಹಣ ಕಾರ್ಯಾಚರಣೆಯಲ್ಲಿ 150 ಕಿಮೀ x 177 ಕಿ.ಮೀ ವೃತ್ತಾಕಾರದ ಕಕ್ಷೆಗೆ ನೌಕೆಯನ್ನು ಇಳಿಸಲಾಗಿದೆ. ಮುಂದಿನ ಕಕ್ಷಾವರೋಹಣವನ್ನು ಆಗಸ್ಟ್ 16, 2023 ರಂದು ಬೆಳಗ್ಗೆ 8.30 ಕ್ಕೆ ಯೋಜಿಸಲಾಗಿದೆ" ಎಂದು ಇಸ್ರೋ ಟ್ವೀಟ್ ನಲ್ಲಿ ತಿಳಿಸಿದೆ.
ಆಗಸ್ಟ್ 16 ರಂದು 100 ಕಿಮೀಗೆ ಕಕ್ಷಾವರೋಹಣ ಮಾಡಿದ ನಂತರ ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡ ಲ್ಯಾಂಡಿಂಗ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್ನಿಂದ ಬೇರ್ಪಡುತ್ತದೆ. ಇದರ ನಂತರ, ಲ್ಯಾಂಡರ್ "ಡಿಬೂಸ್ಟ್" (ನಿಧಾನಗೊಳಿಸುವ ಪ್ರಕ್ರಿಯೆ) ಗೆ ಒಳಗಾಗುವ ನಿರೀಕ್ಷೆಯಿದೆ ಮತ್ತು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೃದುವಾಗಿ ಇಳಿಯುವ (ಸಾಫ್ಟ್ ಲ್ಯಾಂಡಿಂಗ್) ನಿರೀಕ್ಷೆಯಿದೆ.
ಜುಲೈ 14 ರ ಉಡಾವಣೆಯ ನಂತರದ ನಾಲ್ಕು ವಾರಗಳಲ್ಲಿ ಆರು ಬಾರಿ ನಡೆದ ಕಾರ್ಯಾಚರಣೆಗಳ ಮೂಲಕ ಚಂದ್ರಯಾನ -3 ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಹೆಚ್ಚು ದೂರ ಮತ್ತು ದೂರದ ಕಕ್ಷೆಗಳಿಗೆ ಸಾಗಿಸಲಾಗಿತ್ತು. ನಂತರ ಆಗಸ್ಟ್ 1 ರಂದು ನಡೆದ ಪ್ರಮುಖ ಚಿಮ್ಮುವಿಕೆಯ ಕಾರ್ಯತಂತ್ರದ ಮೂಲಕ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಕಳುಹಿಸಲಾಗಿತ್ತು. ಈ ಟ್ರಾನ್ಸ್-ಲೂನಾರ್ ಇಂಜೆಕ್ಷನ್ ನಂತರ, ಚಂದ್ರಯಾನ -3 ಬಾಹ್ಯಾಕಾಶ ನೌಕೆ ಭೂಮಿಯ ಕಕ್ಷೆಯಿಂದ ಪಾರಾಗಿ ಚಂದ್ರನ ಸಮೀಪಕ್ಕೆ ಕರೆದೊಯ್ಯುವ ಮಾರ್ಗವನ್ನು ಅನುಸರಿಸಲು ಪ್ರಾರಂಭಿಸಿತು.
ಚಂದ್ರಯಾನ -3 ಇದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯುವ ಮತ್ತು ಪರಿಭ್ರಮಿಸುವ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಚಂದ್ರಯಾನ್ -2 ರ ಮುಂದಿನ ಹಂತದ ಕಾರ್ಯಾಚರಣೆಯಾಗಿದೆ. ಇದು ಲ್ಯಾಂಡರ್ ಮತ್ತು ರೋವರ್ ಸಂರಚನೆಯನ್ನು ಒಳಗೊಂಡಿದೆ. ಅಂತರ್-ಗ್ರಹ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಉದ್ದೇಶದಿಂದ ಸ್ಥಳೀಯ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಅನ್ನು ಇದು ಒಳಗೊಂಡಿದೆ.
ಲ್ಯಾಂಡರ್ ಮತ್ತು ರೋವರ್ ಸಂರಚನೆಯನ್ನು ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ 100 ಕಿಮೀ ಚಂದ್ರನ ಕಕ್ಷೆಯವರೆಗೆ ಸಾಗಿಸುತ್ತದೆ. ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿಮೆಟ್ರಿಕ್ ಮಾಪನಗಳನ್ನು ಅಧ್ಯಯನ ಮಾಡಲು ಪ್ರೊಪಲ್ಷನ್ ಮಾಡ್ಯೂಲ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ಥ್ (ಶೇಪ್) ಪೇಲೋಡ್ ಅನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು, ಚಂದ್ರನ ಮೇಲೆ ರೋವರ್ ತಿರುಗುವುದನ್ನು ಪ್ರದರ್ಶಿಸುವುದು ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಚಂದ್ರಯಾನ -3 ರ ಮಿಷನ್ನ ಪ್ರಮುಖ ಉದ್ದೇಶಗಳಾಗಿವೆ.
47 ವರ್ಷಗಳ ನಂತರ ಚಂದ್ರನ ಕಡೆಗೆ ತನ್ನ ಮೊದಲ ಬಾಹ್ಯಾಕಾಶ ನೌಕೆ ಲ್ಯಾಂಡರ್ ಲೂನಾ -25 ಅನ್ನು ಉಡಾವಣೆ ಮಾಡಿದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಮಾಸ್ನೊಂದಿಗೆ ಈಗ ಇಸ್ರೊ ಪೈಪೋಟಿ ನಡೆಸುತ್ತಿದೆ. ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಗುರಿಯನ್ನು ಹೊಂದಿರುವ ಭಾರತದ ಚಂದ್ರಯಾನ್ -3 ಹಾಗೂ ರಷ್ಯಾದ ಲೂನಾ -25 ಎರಡೂ ಬಹುತೇಕ ಹತ್ತಿರದ ಅವಧಿಯಲ್ಲಿ ಚಂದ್ರನ ಮೇಲೆ ಲ್ಯಾಂಡ್ ಆಗುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಭಾರಿ ನಷ್ಟದಲ್ಲಿChatGPT ತಯಾರಕ OpenAI: 2024ರ ಅಂತ್ಯಕ್ಕೆ ಕಂಪನಿ ದಿವಾಳಿ ಸಾಧ್ಯತೆ!