ಕರ್ನಾಟಕ

karnataka

ETV Bharat / opinion

ಇಸ್ರೇಲ್​ - ಪ್ಯಾಲೆಸ್ಟೈನ್​ ಸಂಘರ್ಷಕ್ಕಿದೆ ಶತಮಾನದ ಇತಿಹಾಸ: ಈವರೆಗೆ ನಡೆದ ಕದನ, ಸಾವು ಎಷ್ಟು ಗೊತ್ತಾ? - Gaza

ಈ ಲೇಖನದಲ್ಲಿ ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​ ಪಕ್ಷ ವಹಿಸದೇ ಶತಮಾನದ ಸಂಘರ್ಷದಲ್ಲಿ ಎರಡೂ ಕಡೆಗೆ ಉಂಟಾದ ಲಾಭ ಮತ್ತು ನಷ್ಟಗಳನ್ನು ಇಲ್ಲಿ ಹೇಳಲಾಗಿದೆ. ಯಾರು ನಿಜವಾದ ಸಂತ್ರಸ್ತರು ಮತ್ತು ಯಾರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬುದನ್ನು ನಿರ್ಣಯಿಸಲು ಓದುಗರಿಗೆ ಬಿಡಲಾಗಿದೆ.

ಇಸ್ರೇಲ್​- ಪ್ಯಾಲೆಸ್ಟೈನ್​ ಸಂಘರ್ಷಕ್ಕಿದೆ ಶತಮಾನದ ಇತಿಹಾಸ
ಇಸ್ರೇಲ್​- ಪ್ಯಾಲೆಸ್ಟೈನ್​ ಸಂಘರ್ಷಕ್ಕಿದೆ ಶತಮಾನದ ಇತಿಹಾಸ

By ETV Bharat Karnataka Team

Published : Dec 11, 2023, 7:50 PM IST

ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​ ಸಂಘರ್ಷಕ್ಕೆ ಶತಮಾನದ ಇತಿಹಾಸವಿದೆ. ಎರಡು ದೇಶಗಳ ನಡುವೆ ಹಲವು ಯುದ್ಧಗಳು ಜರುಗಿವೆ. ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಾಣತ್ಯಾಗ ಮಾಡಿದ್ದಾರೆ. ಈಗಲೂ ಎರಡು ರಾಷ್ಟ್ರಗಳ ಮಧ್ಯೆ ಭೀಕರ ಕದನ ನಡೆಯುತ್ತಿದೆ. ಸಂಘರ್ಷಕ್ಕೆ ಕಾರಣ ಮತ್ತು ಕದನ ಇತಿಹಾಸವನ್ನು ಈ ಲೇಖನದಲ್ಲಿ ವಕೀಲ ಚೈತನ್ಯ ಪಾಂಡೆ ಮತ್ತು ಸೊಸೈಟಿ ಪಾರ್ಟಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಂಡೆ ಅವರು ವಿವರಿಸಿದ್ದಾರೆ.

ಸಂಘರ್ಷದ ಹಾದಿ:1948 ರಲ್ಲಿ ಇಸ್ರೇಲ್ ರಚನೆಯ ಸಮಯದಲ್ಲಿ 15 ಸಾವಿರ ಪ್ಯಾಲೆಸ್ಟೈನಿಯನ್ನರು ಜಿಯೋನಿಸ್ಟ್ ಪಡೆಗಳಿಂದ ಕೊಲ್ಲಲ್ಪಟ್ಟರು. 1967 ರಲ್ಲಿ 6 ದಿನಗಳ ಯುದ್ಧದಲ್ಲಿ ಇಸ್ರೇಲ್​ ನೆರೆಯ ರಾಷ್ಟ್ರದ ಪ್ರದೇಶವಾದ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಅನ್ನು ವಶಪಡಿಸಿಕೊಂಡಿತು. 1972 ರಲ್ಲಿ ಪ್ಯಾಲೆಸ್ಟೈನಿಯನ್ ಬಂದೂಕುಧಾರಿಗಳು ಮ್ಯೂನಿಕ್ ಒಲಿಂಪಿಕ್ಸ್​ನಲ್ಲಿ 17 ಇಸ್ರೇಲಿ ಕ್ರೀಡಾಪಟುಗಳನ್ನು ಕೊಂದರು. 1982 ರಲ್ಲಿ ಇಂಗ್ಲೆಂಡ್​ನಲ್ಲಿ ಇಸ್ರೇಲಿ ರಾಯಭಾರಿಯ ಹತ್ಯೆಗೆ ವಿಫಲ ಯತ್ನ ನಡೆಸಲಾಯಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್, ದಕ್ಷಿಣ ಲೆಬನಾನ್ ಅನ್ನು ಆಕ್ರಮಿಸಿತು. ಬೈರುತ್‌ನ ಸಾಬ್ರಾ ಮತ್ತು ಶಟಿಲಾ ನಿರಾಶ್ರಿತರ ಶಿಬಿರಗಳಲ್ಲಿ ಸಾವಿರಾರು ಪ್ಯಾಲೆಸ್ಟೈನ್ ನಿರಾಶ್ರಿತರನ್ನು ಕಗ್ಗೊಲೆ ಮಾಡಲು ಕ್ರಿಶ್ಚಿಯನ್ ಮಿಲಿಷಿಯಾಗಳನ್ನು ಪ್ರಚೋದಿಸಲಾಯಿತು. 1987 ರಲ್ಲಿ ನಡೆದ ಮತ್ತೊಂದು ಸಂಘರ್ಷವು 1990ರ ದಶಕದ ಆರಂಭದವರೆಗೆ ಮುಂದುವರೆಯಿತು. ಇದರಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರು ಕೊಲ್ಲಲ್ಪಟ್ಟರು.

1993 ರ ಓಸ್ಲೋ ಒಪ್ಪಂದದ ಪ್ರಕಾರ, ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಪ್ಯಾಲೆಸ್ಟೈನಿಯನ್ ಆಡಳಿತಕ್ಕೆ ಒಳಪಡುತ್ತದೆ ಎಂದು ನಿರ್ಧರಿಸಲಾಯಿತು. ಇಸ್ರೇಲ್ ಪಡೆಗಳನ್ನು ಈ ಪ್ರದೇಶಗಳಿಂದ ಹಿಂತೆಗೆದುಕೊಳ್ಳಲು ಸೂಚಿಸಲಾಯಿತು. ಆದರೆ, ಇಸ್ರೇಲ್​ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಿಲ್ಲ. ಇಸ್ರೇಲಿ ನಾಯಕ ಏರಿಯಲ್ ಶರೋನ್ ಅಲ್-ಅಕ್ಸಾ ಮಸೀದಿಗೆ ಭೇಟಿ ನೀಡಿ ಪ್ಯಾಲೆಸ್ಟೈನಿಯನ್ನರೊಂದಿಗೆ ಸಂಘರ್ಷಕ್ಕೆ ಪ್ರಚೋದನೆ ನೀಡಿದರು.

ಇದರಿಂದ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಅನ್ನು ಇಸ್ರೇಲ್ ಪುನಃ ಪ್ರವೇಶಿಸಿತು. 2000-2003 ರ ಅವಧಿಯಲ್ಲಿ ನಡೆದ ಸಂಘರ್ಷದಲ್ಲಿ 4,300 ಜನರು ಸತ್ತರು. ಅದರಲ್ಲಿ ಪ್ಯಾಲೆಸ್ಟೈನಿಯನ್ನರೇ ಹೆಚ್ಚು. 2005 ರಲ್ಲಿ ಶರೋನ್ ಸರ್ಕಾರವು 8,500 ಇಸ್ರೇಲಿಗಳನ್ನು ವಸಾಹತುಗಳಿಂದ ಹಿಂತೆಗೆದುಕೊಂಡಿತು. ಗಾಜಾ ಮತ್ತು ಪಶ್ಚಿಮ ದಂಡೆಯಿಂದ ಪಡೆಗಳು ಪ್ಯಾಲೆಸ್ಟೈನಿಯನ್ ಆಡಳಿತದ ಅಧ್ಯಕ್ಷ ಮಹಮೂದ್ ಅಬ್ಬಾಸ್ ನಿಯಂತ್ರಣವನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟವು.

ಗಾಜಾದ ಮೇಲೆ ಹಮಾಸ್​ ಹಿಡಿತ:2006 ರಲ್ಲಿ ಹಮಾಸ್ ಪಡೆ ಪ್ರವರ್ಧಮಾನಕ್ಕೆ ಬಂದಿತು. ಕೌನ್ಸಿಲ್‌ ಚುನಾವಣೆಯಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದುಕೊಂಡಿತು. ಅಂತರ್ಯುದ್ಧದಲ್ಲಿ ಫತಾಹ್ ಅನ್ನು ಸೋಲಿಸಿದ ನಂತರ ಗಾಜಾದ ನಿಯಂತ್ರಣವನ್ನು ತೆಗೆದುಕೊಂಡಿತು. ಪ್ಯಾಲೆಸ್ಟೈನಿಯನ್ ಆಡಳಿತವು ವೆಸ್ಟ್ ಬ್ಯಾಂಕ್​ ನಿಯಂತ್ರಣವನ್ನು ಉಳಿಸಿಕೊಂಡಿತು. ಆದರೆ,ಇಸ್ರೇಲ್ ಹಮಾಸ್ ಆಡಳಿತವನ್ನು ನಿರಾಕರಿಸಿತು ಮತ್ತು ಗಾಜಾದ ಮೇಲೆ ದಿಗ್ಬಂಧನವನ್ನು ಪ್ರಾರಂಭಿಸಿತು. ಅಲ್ಲಿಂದ ಆರಂಭವಾದ ತಿಕ್ಕಾಟ ಇಲ್ಲಿಯವರೆವೂ ಮುಂದುವರಿದಿದೆ.

2008 ರಲ್ಲಿ ಇಸ್ರೇಲ್ ಗಾಜಾದ ಮೇಲೆ ದಾಳಿ ಮಾಡಿತು. ಇದರಲ್ಲಿ 1,400 ಪ್ಯಾಲೆಸ್ಟೈನಿಯನ್ನರು ಮತ್ತು 13 ಇಸ್ರೇಲಿಗಳು ಸಾವನ್ನಪ್ಪಿದರು. 2012 ರಲ್ಲಿ ಹಮಾಸ್ ಉಡಾವಣೆ ಮಾಡಿದ ರಾಕೆಟ್‌ಗಳಿಗೆ ಪ್ರತಿಯಾಗಿ, ಇಸ್ರೇಲ್ ಗಾಜಾದ ಮೇಲೆ 8 ದಿನಗಳ ಕಾಲ ದಾಳಿ ನಡೆಸಿತು. ಇದರಲ್ಲಿ 180 ಜನರು ಸತ್ತರು. 2014 ರಲ್ಲಿ ಹಮಾಸ್ 3 ಇಸ್ರೇಲಿ ಯುವಕರನ್ನು ಅಪಹರಿಸಿ ಕೊಂದಿತು. ಇದು ಗಾಜಾದ ಮೇಲೆ ದಾಳಿ ಮಾಡಲು ಇಸ್ರೇಲ್ ಅನ್ನು ಪ್ರಚೋದಿಸಿತು. ಏಳು ವಾರಗಳ ಕಾಲ ನಡೆದ ಕದನದಲ್ಲಿ 2,310 ಪ್ಯಾಲೆಸ್ಟೈನಿಯನ್ನರು ಮತ್ತು 73 ಇಸ್ರೇಲಿಗಳು ಹತರಾದರು.

2021 ರಲ್ಲಿ ನಡೆದ ಮತ್ತೊಂದು ಘರ್ಷಣೆಯಲ್ಲಿ 340 ಪ್ಯಾಲೆಸ್ಟೈನಿಯನ್ನರು ಮತ್ತು 11 ಇಸ್ರೇಲಿಗಳು ಕೊಲ್ಲಲ್ಪಟ್ಟರು. ಪ್ರಸ್ತುತ (2023) ನಡೆಯುತ್ತಿರುವ ಸಂಘರ್ಷದಲ್ಲಿ 1,400 ಇಸ್ರೇಲಿಗಳನ್ನು ಹಮಾಸ್​ ಕೊಂದಿದ್ದು, ಇದಕ್ಕೆ ಪ್ರತಿಯಾಗಿ ಯುದ್ಧ ಸಾರಿರುವ ಇಸ್ರೇಲ್​, ಈವರೆಗೂ 11,000 ಪ್ಯಾಲೆಸ್ಟೈನಿಯನ್ನರನ್ನು ಬಲಿ ಪಡೆದಿದೆ. ಜೊತೆಗೆ 25,000 ಜನರು ಗಾಯಗೊಂಡಿದ್ದಾರೆ. ಈವರೆಗಿನ ಎರಡು ರಾಷ್ಟ್ರಗಳ ನಡುವೆ ಸಂಭವಿಸಿದ ಕದನದಲ್ಲಿ ಹತರಾದ ಪ್ಯಾಲೆಸ್ಟೈನಿಯನ್ನರ ಸಂಖ್ಯೆ ಸುಮಾರು 40 ಸಾವಿರ ಆಗಿದ್ದರೆ, ಇಸ್ರೇಲಿಗರು 10/1 ಕ್ಕಿಂತ ಕಡಿಮೆ. ಅಂದರೆ, 308 ಇಸ್ರೇಲಿಗರಾಗಿದ್ದರೆ, 6,407 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ.

ನೆಲೆ ಕಂಡುಕೊಂಡ ಯಹೂದಿಗಳು:1917 ರಲ್ಲಿ ಬಾಲ್ಫೋರ್ ಒಪ್ಪಂದವು ಪ್ಯಾಲೆಸ್ಟೈನ್​ನಲ್ಲಿ ಯಹೂದಿ ಜನರಿಗೆ ನೆಲೆಯನ್ನು ನೀಡಲಾಯಿತು. ಆಗ ಯಹೂದಿ ಜನಸಂಖ್ಯೆಯು ಇಲ್ಲಿ ಶೇಕಡಾ 15 ಕ್ಕಿಂತ ಕಡಿಮೆಯಿತ್ತು. ಇಂದು ಇಸ್ರೇಲಿ ಜನಸಂಖ್ಯೆಯು 93.6 ಲಕ್ಷ ಎಂದು ಪರಿಗಣಿಸಿದರೆ, ಅದರಲ್ಲಿ 17 ಲಕ್ಷ ಮುಸ್ಲಿಮರು. ವೆಸ್ಟ್ ಬ್ಯಾಂಕ್ ಮತ್ತು ಗಾಜಾದ ಜನಸಂಖ್ಯೆಯು ಕ್ರಮವಾಗಿ 30 ಮತ್ತು 23 ಲಕ್ಷ. ಅಂದರೆ, ಈಗ ಯಹೂದಿಗಳು ಪ್ಯಾಲೆಸ್ಟೈನಿಯನ್ನರ ಒಟ್ಟು ಜನಸಂಖ್ಯೆಯ ಶೇಕಡಾ 53 ಕ್ಕಿಂತಲೂ ಹೆಚ್ಚು ಇದ್ದಾರೆ.

ಪ್ರಸ್ತುತ ಯುದ್ಧದಲ್ಲಿ 6 ಸಾವಿರ ಪ್ಯಾಲೆಸ್ಟೈನಿಯನ್ ಖೈದಿಗಳನ್ನು ಇಸ್ರೇಲ್ ಬಂಧಿಸಿ ಜೈಲಿನಲ್ಲಿಟ್ಟಿದೆ. ದಾಳಿಯ ವೇಳೆ 200 ಕ್ಕೂ ಅಧಿಕ ಜನರನ್ನು ಹಮಾಸ್​ ಬಂಧಿಯನ್ನಾಗಿ ಮಾಡಿಕೊಂಡಿದೆ. ಗಾಜಾ ಪಟ್ಟಿಯ ಮೇಲೆ ಹಿಡಿತ ಸಾಧಿಸಲು ಬಯಸುವ ಇಸ್ರೇಲ್​, ಅದನ್ನು ಅತಿದೊಡ್ಡ ತೆರೆದ ಜೈಲು ಎಂದು ಪರಿಗಣಿಸುತ್ತದೆ. ಇಸ್ರೇಲ್ 58,273 ಡಾಲರ್​ ಜಿಡಿಪಿಯೊಂದಿಗೆ ಪ್ರವರ್ಧಮಾನ ಹೊಂದುತ್ತಿರುವ ರಾಷ್ಟ್ರವಾದರೆ, ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನ ಜಿಡಿಪಿ ಕ್ರಮವಾಗಿ ಕೇವಲ 876 ಡಾಲರ್​ ಮತ್ತು 1924 ಡಾಲರ್​ ಆಗಿದೆ. ಗಾಜಾದ ಹೆಚ್ಚಿನ ಆರ್ಥಿಕತೆಯು ಇಸ್ರೇಲ್‌ನ ಮೇಲೆ ಅವಲಂಬಿಸಿದೆ. ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್, ಗಾಜಾಕ್ಕೆ ಸರಬರಾಗುವ ಆಹಾರ ಮತ್ತು ಇಂಧನವನ್ನು ತಡೆದು ಅಲ್ಲಿ ಸಿಕ್ಕಿಬಿದ್ದ ಜನರ ಉಸಿರುಗಟ್ಟಿಸುತ್ತಿದೆ.

ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 163 ನೇ ರಾಷ್ಟ್ರವಾಗಿ ಇಸ್ರೇಲ್, 138 ನೇ ರಾಷ್ಟ್ರವಾಗಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲಾಗುತ್ತದೆ. ಆದರೆ, ಪ್ಯಾಲೆಸ್ಟೈನ್ 2012 ರಲ್ಲಿ ಒಮ್ಮೆ ಮಾತ್ರ ಸದಸ್ಯೇತರ ವೀಕ್ಷಕ ಸ್ಥಾನಮಾನವನ್ನು ಪಡೆದುಕೊಂಡಿದೆ. ವಿಶ್ವಸಂಸ್ಥೆಯ 1947ರ ನಿರ್ಣಯದಂತೆ ಪ್ಯಾಲೆಸ್ಟೈನ್ ಅನ್ನು ಎರಡು ರಾಜ್ಯಗಳಾಗಿ ಸ್ಪಷ್ಟವಾಗಿ ವಿಂಗಡಿಸಿತು. ಒಂದು ಪ್ಯಾಲೆಸ್ಟೈನ್ ಇನ್ನೊಂದು ಇಸ್ರೇಲ್.

ಇದನ್ನೂ ಓದಿ:ಹಮಾಸ್-ಇಸ್ರೇಲ್​ ಕದನ ವಿರಾಮ ಒಪ್ಪಂದ: ಮತ್ತೆ 17 ಒತ್ತೆಯಾಳುಗಳ ಬಿಡುಗಡೆ, ಈಜಿಪ್ಟ್‌ಗೆ ರವಾನೆ

ABOUT THE AUTHOR

...view details