ಕರ್ನಾಟಕ

karnataka

ETV Bharat / opinion

ವಿಶೇಷ ಅಂಕಣ: ಇನ್ನಷ್ಟು ಬಲಗೊಳ್ಳಬೇಕಿದೆ ಹಸಿವು ನೀಗಿಸುವ ಉದ್ಯೋಗ ಖಾತ್ರಿ ಯೋಜನೆ

ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕೇವಲ 34 ಲಕ್ಷ ಕುಟುಂಬಗಳಿಗೆ ಮಾತ್ರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೀಮಿತವಾಗಿದ್ದು, ಬಡ ಜನರ ಜೀವನೋಪಾಯಕ್ಕೆ ಕುತ್ತು ಉಂಟಾಗಿದೆ.

employment scheme
ಉದ್ಯೋಗ ಖಾತ್ರಿ ಯೋಜನೆ

By

Published : Jul 10, 2020, 1:49 PM IST

ಲಕ್ಷಾಂತರ ಕಾರ್ಮಿಕರು ತಮ್ಮ ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಬರುವ ದೇಶ ನಮ್ಮದು. ಇದೀಗ ಕೊರೊನಾ ತಂದೊಡ್ಡಿರುವ ಸಂಕಷ್ಟದ ಸನ್ನಿವೇಶದಲ್ಲಿ ಜನರ ಜೀವನೋಪಾಯಕ್ಕೆ ಕುತ್ತು ಉಂಟಾಗಿದೆ. ಹೀಗಾಗಿ ಅವರೆಲ್ಲ ಮನಸ್ಸಿಲ್ಲದ ಮನಸ್ಸಿನಿಂದ ಮನೆಗೆ ಮರಳುತ್ತಿದ್ದಾರೆ. ಭಾವುಕರಾಗಿ ಭಾರದ ಹೆಜ್ಜೆಗಳನ್ನು ಇಡುತ್ತಾ ತಮ್ಮ ಊರುಗಳಿಗೆ ಹಿಂದಿರುಗಿದ ಎಲ್ಲರನ್ನೂ, ಈಗ ಬದುಕಿನ ಬರ್ಬರತೆ ಕಾಡುತ್ತಿದೆ. ಅಂದಂದಿನ ದುಡಿಮೆಯಿಂದ ಅಷ್ಟೋ- ಇಷ್ಟೋ ಅನ್ನ ಗಳಿಸುತ್ತಿದ್ದವರಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಾಂತ್ವನ ರೂಪದಲ್ಲಿ ದಕ್ಕಿರುವುದು ನಿಜ.

ಕಳೆದ ವರ್ಷ ಏಪ್ರಿಲ್ ವೇಳೆಗೆ, 7 ಕೋಟಿ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನಯ ಲಾಭ ಲಭಿಸಿತು. ಆದರೆ ಈ ವರ್ಷ, ಲಾಕ್​​ಡೌನ್ ಕಾರಣದಿಂದಾಗಿ, ಕೇವಲ 34 ಲಕ್ಷ ಕುಟುಂಬಗಳಿಗೆ ಯೋಜನೆ ಸೀಮಿತಗೊಂಡಿದೆ. ದೂರದ ಹಳ್ಳಿಗಳಿಂದ ವಲಸೆ ಬಂದ ಕಾರ್ಮಿಕರಿಗೆ ಸಂಬಂಧಿಸಿದ ನೇಮಕಾತಿ ಪ್ರಮಾಣವನ್ನು ಕಳೆದ ತಿಂಗಳ ವಲಸೆ ಕಾರ್ಮಿಕರ ಅಂಕಿ - ಅಂಶಗಳು ಪ್ರತಿಬಿಂಬಿಸುತ್ತವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 7.3 ಕೋಟಿ ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಆದರೆ ಅದರಲ್ಲಿ ಎರಡು ಕೋಟಿಗೂ ಹೆಚ್ಚು ಜನರು ತಮಗೆ ಲಭಿಸುವ ಅವಕಾಶಕ್ಕಾಗಿ ಕಾಯುತ್ತ ಕೂರಬೇಕಾಯಿತು. ಕಳೆದ ವರ್ಷ, ಸುಮಾರು 1.45 ಕೋಟಿ ಕಾರ್ಮಿಕರಿಗೆ ಸೂಕ್ತ ಕೆಲಸ ಒದಗಿಸಲು ಸಾಧ್ಯ ಆಗಲಿಲ್ಲ. ಈ ವರ್ಷ ಹಾಗೆ ಸೂಕ್ತ ಕೆಲಸ ದೊರೆಯದವರ ಪ್ರಮಾಣ ದ್ವಿಗುಣಗೊಂಡಿದೆ. ಕಳೆದ 3 ತಿಂಗಳಲ್ಲಿ ಈ ಅಂಕಿ ಅಂಶವು ಸಾಕಷ್ಟು ಹೆಚ್ಚಿದ್ದು ದುಃಖಕರ ಸಂಗತಿ. ಇದು ಆರ್ಥಿಕ ವಲಯದ ಪಂಡಿತರ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗೆ ಮಾಡುತ್ತಿದೆ. ಆತ್ಮ- ನಿರ್ಭರ ಭಾರತ ( ಸ್ವಾವಲಂಬನ್ ಭಾರತ್ ಅಥವಾ ಸ್ವಾವಲಂಬಿ ಭಾರತ ) ಕಾರ್ಯತಂತ್ರದ ಭಾಗವಾಗಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಬಜೆಟ್ ಹಂಚಿಕೆ ಮಾಡಲಾಗಿದೆ. ಅದರಂತೆ ಈಗಾಗಲೇ ಯೋಜನೆಗಾಗಿ ಮೀಸಲಿಟ್ಟಿದ್ದ 61,000 ಕೋಟಿ ರೂಪಾಯಿಯ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 40 ಸಾವಿರ ಕೋಟಿ ರೂಪಾಯಿ ಮುಡುಪಿಡಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರ 300 ಕೋಟಿ ರೂಪಾಯಿ ಮೌಲ್ಯದ ಕೆಲಸದ ದಿನಗಳ ಗುರಿಯನ್ನು ನಿಗದಿಪಡಿಸಿದೆ. ಇಷ್ಟೆಲ್ಲ ಕ್ರಮ ಕೈಗೊಂಡಿದ್ದರೂ ಕೆಲಸ ಅಗತ್ಯ ಇರುವವರ ಪಾಲಿಗೆ ಇದು ಅರೆಕಾಸಿನ ಮಜ್ಜಿಗೆಯಂತೆ ಆಗಿದೆ ಎಂಬ ಆತಂಕ ಹೆಚ್ಚುತ್ತಿದೆ.

ಗ್ರಾಮೀಣ ಉದ್ಯೋಗ ಕಾಯ್ದೆ ನೀಡಿರುವ ಭರವಸೆ ಪ್ರಕಾರ ವರ್ಷಕ್ಕೆ ಒಂದು ಕುಟುಂಬದ, ಒಬ್ಬ ವ್ಯಕ್ತಿಗೆ ಕನಿಷ್ಠ 100 ದಿನಗಳ ಕೆಲಸ ಒದಗಿಸಬೇಕಿದೆ. 100 ದಿನಗಳ ಕೆಲಸದ ಮಿತಿ ಈಗಾಗಲೇ 4 ಕೋಟಿ ಕುಟುಂಬಗಳನ್ನು ತಲುಪಿದೆ. ಇನ್ನೂ 23 ಲಕ್ಷ ಕುಟುಂಬಗಳು ಈಗಾಗಲೇ 60 ದಿನಗಳ ಕೆಲಸದ ರೀತಿಯ ಯೋಜನೆಯ ಫಲಾನುಭವ ಪಡೆದುಕೊಂಡಿವೆ. ಪ್ರತಿದಿನವೂ ಕೆಲಸ ಮಾಡದ ಹೊರತು ತಮ್ಮ ಹಸಿವನ್ನು ಪೂರೈಸಿಕೊಳ್ಳಲು ಸಾಧ್ಯ ಆಗದ ಲಕ್ಷಾಂತರ ಕುಟುಂಬಗಳಿವೆ. ಅಂತಹ ಕುಟುಂಬಗಳು ಹಸಿವಿನಿಂದಾಗಿ ಜೀವ ತೊರೆಯದಂತೆ ರಕ್ಷಿಸಬೇಕಾದರೆ, ಕೇಂದ್ರ ಸರ್ಕಾರ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಇಂತಿಷ್ಟು ಕೆಲಸದ ದಿನಗಳು ಎಂಬ ಮಿತಿಯನ್ನು ತೆಗೆದು ಹಾಕಿ ಧೃತಿಗೆಟ್ಟ ಕುಟುಂಬಗಳಿಗೆ ಖಚಿತ ಉದ್ಯೋಗ ಒದಗಿಸಲು ಸರ್ಕಾರ ಮನಸ್ಸು ಮಾಡಬೇಕಿದೆ !

ಕೋವಿಡ್ ಪಸರಿಸದಂತೆ ತಡೆಯಲು ಲಾಕ್ ಡೌನ್ ಹೇರಿದ್ದರ ಪರಿಣಾಮ ನಗರಗಳಲ್ಲಿ ಸುಮಾರು 1.2 ಕೋಟಿ ಜನರು ಮತ್ತು ಗ್ರಾಮೀಣ ಪ್ರದೇಶದ 2.8 ಕೋಟಿ ಮಂದಿ ಇತ್ತೀಚೆಗೆ ಬಡತನದ ದವಡೆಯಲ್ಲಿ ಸಿಲುಕಿದ್ದಾರೆ ಎಂದು ಅಧ್ಯಯನಗಳು ವಿವರಿಸಿವೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶದ ಜನಸಂಖ್ಯೆಯ ಶೇ 47ರಷ್ಟು ಮಂದಿ ತೀವ್ರ ಬಡತನದ ಬಲೆಗೆ ಬಿದ್ದಿದ್ದಾರೆ. ವಿಶೇಷವಾಗಿ ತಮ್ಮನ್ನು ಕೈಗಾರಿಕೆಗಳ ಕಾರ್ಮಿಕರಂತೆ ಪರಿಗಣಿಸಲಾಗುತ್ತದೆ ಮತ್ತು ವಿಮಾ ರಕ್ಷಣೆ ದೊರೆಯುತ್ತದೆ ಎಂದು ಭಾವಿಸಿದ್ದ ನಗರ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರ ಶೇಕಡಾ 11 ರಷ್ಟು ಪಾವತಿ ಹೆಚ್ಚಳ ಮಾಡಿದೆ. ಆದರೆ, ಇದು ಕೃಷಿ ಕಾರ್ಮಿಕರ ಕನಿಷ್ಠ ವೇತನಕ್ಕಿಂತ ಶೇಕಡಾ 40- 50ರಷ್ಟು ಕಡಿಮೆ ಇದೆ ! ತಳಮಟ್ಟದಲ್ಲಿ ಅಗತ್ಯವಿರುವ ಪ್ರತಿಯೊಬ್ಬ ಕೆಲಸಗಾರರಿಗೂ ಲಭ್ಯವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯ ಪ್ರಯೋಜನಗಳನ್ನು ವಿಕೇಂದ್ರೀಕರಣಗೊಳಿಸಬೇಕಾಗಿದೆ. ಇದು ಯೋಜನೆಯ ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದಿಲ್ಲ, ಆದರೆ ಕಾರ್ಮಿಕರು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ( ಎಲ್‌ಆರ್‌ಡಿ ) ಇತ್ತೀಚಿನ ಹೇಳಿಕೆ ಪ್ರಕಾರ, ಅದನ್ನು ಕೇಳುತ್ತಿರುವವರಿಗೆ ಕೆಲಸ ನೀಡಲು ಸರ್ಕಾರಕ್ಕೆ ಸಾಧ್ಯ ಆಗುತ್ತಿಲ್ಲ. ಕಳೆದ ವರ್ಷ ಕೇವಲ 46 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ, ಕೇಂದ್ರ ಸರ್ಕಾರ ಸುಮಾರು 68,000 ಕೋಟಿ ರೂ.ಗಳನ್ನು ಬಜೆಟ್ ಮೂಲಕ ಖರ್ಚು ಮಾಡಿದ್ದು, ಇದರಿಂದ ಸುಮಾರು 5.48 ದಶಲಕ್ಷ ಗ್ರಾಮೀಣ ಕುಟುಂಬಗಳಿಗೆ ಸರಾಸರಿ 48 ದಿನಗಳ ಕೆಲಸ ದಕ್ಕಿದೆ.

ಇದರಲ್ಲಿ ವೇತನ ಮಸೂದೆಯೊಂದೇ ಸುಮಾರು ರೂ. 49,000 ಕೋಟಿ ರೂ. ಗಾತ್ರ ಸೂಚಿಸುತ್ತದೆ. ಆರು ರಾಜ್ಯಗಳ 116 ಜಿಲ್ಲೆಗಳಿಗೆ ಪ್ರಯಾಣಿಸುತ್ತಿರುವ ವಲಸೆ ಕಾರ್ಮಿಕರ ಸಂಖ್ಯೆಯಲ್ಲಿ ದಿನನಿತ್ಯದ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ ಗರಿಬ್ ಕಲ್ಯಾಣ್ ರೋಜಗಾರ್ ಯೋಜನೆ ’ ಅಡಿಯಲ್ಲಿ ರೂ .50,000 ಕೋಟಿ ಬಜೆಟ್ ಮೀಸಲಿಟ್ಟಿದೆ. ಎಲ್ಲ ರೀತಿಯಲ್ಲೂ ದೇಶದ ಉದ್ಯೋಗ ಖಾತರಿಯನ್ನು ಉತ್ಕೃಷ್ಟಗೊಳಿಸುವ ಅವಶ್ಯಕತೆಯಿದೆ ಎಂದು ಇದು ಸ್ವತಃ ಸಾಬೀತುಪಡಿಸುತ್ತದೆ. ಕರೋನಾ ಸಾಂಕ್ರಾಮಿಕ ಮತ್ತು ಸಾಮಾಜಿಕ ಅಂತರದ ಹಿನ್ನೆಲೆಯಲ್ಲಿ ಬಾವಿಗಳನ್ನು ಅಗೆಯುವುದು, ಹಳ್ಳಗಳನ್ನು ತೋಡುವುದು ಮತ್ತು ಗಿಡಗಳನ್ನು ನೆಡುವುದು ಮುಂತಾದ ಪಾಲನಾ ಯೋಜನೆಗಳನ್ನು ಉಲ್ಲೇಖಿಸುತ್ತಿರುವ ಕೇಂದ್ರ ಸರ್ಕಾರ ಸಾಂಕ್ರಾಮಿಕ ರೋಗ ನಿರ್ಮೂಲನೆ ಆಗುವವರೆಗೆ ದೇಶಾದ್ಯಂತ ಉದ್ಯೋಗ ಖಾತರಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು.

ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡಲು ಮತ್ತು ಸಾರ್ವಜನಿಕರ ಹಿತ ಕಾಯುವಂತಹ ಸ್ವತ್ತುಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವನ್ನು ಬೆಂಬಲಿಸಬೇಕಿದೆ. ಇದಕ್ಕಾಗಿ ಎಲ್ಲ ರಾಜ್ಯ ಸರ್ಕಾರಗಳು ಕೈಜೋಡಿಸುವ ಸಮಯ ಕೂಡಿ ಬಂದಿದೆ. ಇದು ಬಡ ಕಾರ್ಮಿಕ ತನ್ನ ದೈನಂದಿನ ಕೆಲಸವನ್ನು ಮತ್ತು ದಿನದ ಅಂತ್ಯದ ವೇಳೆಗೆ ಅವನ ದೈನಂದಿನ ದುಡಿಮೆ ಪಡೆಯುವುದನ್ನು ಖಚಿತಪಡಿಸುತ್ತದೆ. ಜೊತೆಗೆ “ಕಾಯಕವೇ ಕೈಲಾಸ” ಎಂಬ ಮಾತನ್ನು ಕೂಡ ಸಾಕಾರಗೊಳಿಸುತ್ತದೆ !

ABOUT THE AUTHOR

...view details