ಚಿತ್ರದುರ್ಗ:ಟೈರ್ ಬ್ಲಾಸ್ಟ್ ಆಗಿ ನಿಂತಿದ್ದ ಟೆಂಪೋ ಟ್ರಾವೆಲರ್ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ಘಟನೆ ನಗರದ ರೇಷ್ಮೆ ಇಲಾಖೆ ಕಚೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ.
ವಿದ್ಯಾರ್ಥಿಗಳಾದ ಹರ್ಷ, ಶ್ರೀನಿಧಿ ಹಾಗೂ ಕಾರ್ತಿಕ್ ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಕಾಲೇಜಿನ 14 ವಿದ್ಯಾರ್ಥಿಗಳು ಟೆಂಪೋ ಟ್ರಾವೆಲರ್ನಲ್ಲಿ ಗೋಕರ್ಣ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಟೆಂಪೋ ಟ್ರಾವೆಲರ್‌ನ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕ ವಾಹನವನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಇಬ್ಬರು ವಿದ್ಯಾರ್ಥಿಗಳ ಜೊತೆ ಗ್ಯಾರೇಜ್ಗೆ ತೆರಳಿದ್ದರು. ಈ ವೇಳೆ ನಿದ್ದೆ ಮಂಪರಿನಲ್ಲಿದ್ದ ಲಾರಿ ಚಾಲಕ, ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಒಂದು ಕಾರು ಕೂಡ ಜಖಂಗೊಂಡಿದೆ ಎನ್ನಲಾಗುತ್ತಿದೆ. ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದ್ದು, ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.