ಕೊಲ್ಲಂ: ಪತ್ನಿಯನ್ನು ಎರಡು ಬಾರಿ ಹಾವಿನಿಂದ ಕೊಚ್ಚಿಸಿ ಕೊಲೆ ಮಾಡಿದ್ದ ಪ್ರಕರಣದ ಬಂಧಿತ ಆರೋಪಿಯಿಂದ ಪೊಲೀಸರು ಸ್ಥಳ ಮಹಜರು ಮಾಡಿಸಿದ್ದಾರೆ. ಸಾಕ್ಷ್ಯ ಸಂಗ್ರಹಿಸುವ ಸಲುವಾಗಿ ಕೊಲ್ಲಂನ ಅಪರಾಧ ದಳದ ಅಧಿಕಾರಿಗಳು ಮಹಿಳೆಯ ನಿವಾಸಕ್ಕೆ ಆರೋಪಿಯನ್ನು ಕರೆ ತಂದು ಪರಿಶೀಲನೆ ನಡೆಸಿದ್ದಾರೆ.
ಕೊಲ್ಲಂ ಹತ್ಯೆ ಕೇಸ್: ಕಚ್ಚಿದ ಹಾವಿನ ಮರಣೋತ್ತರ ಪರೀಕ್ಷೆ, ಡಿಎನ್‌ಎ ಸಂಗ್ರಹ ಪ್ರಾಥಮಿಕ ವರದಿಗಳ ಪ್ರಕಾರ, ಮಹಿಳೆ ಮೃತಪಟ್ಟಿದ್ದ ಕೊಠಡಿ ಬಳಿ ಹಾವು ಪತ್ತೆಯಾಗಿತ್ತು. ಆರೋಪಿ ಸೂರಜ್ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾವನ್ನು ತಂದಿದ್ದ ಎನ್ನಲಾಗಿದೆ. ವಿಧಿ ವಿಜ್ಞಾನ ಇಲಾಖೆ ತಜ್ಞರು ಮತ್ತು ಬೆರಳಚ್ಚು ತಜ್ಞರು ವೈಜ್ಞಾನಿಕ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
27 ವರ್ಷದ ಆರೋಪಿ ಸೂರಜ್ ಖಾಸಗಿ ಬ್ಯಾಂಕ್‌ವೊಂದರ ಉದ್ಯೋಗಿಯಾಗಿದ್ದಾನೆ. ಅಂತರ್ಜಾಲದಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿದ್ದನಂತೆ. ಬಳಿಕ ತನ್ನ 25 ವರ್ಷದ ಪತ್ನಿಯನ್ನು ಹಾವಿನಿಂದ ಎರಡು ಬಾರಿ ಕಚ್ಚಿಸಿ ಆಕೆಯ ಸಾವಿಗೆ ಕಾರಣನಾಗಿದ್ದ. ಪತ್ನಿಯ ಹಣ, ಚಿನ್ನಾಭರಣ ತೆಗೆದುಕೊಂಡು ಬೇರೆ ಮದುವೆಯಾಗುವ ಆಲೋಚನೆಯಲ್ಲಿದ್ದನಂತೆ. ಮೇ 7ರಂದು ಉತ್ರಾ ಮೃತಪಟ್ಟಿದ್ದಳು.
ಘಟನೆ ಬಗ್ಗೆ ಮಾಹಿತಿ ನೀಡಿರುವ ಕೇರಳ ಡಿಜಿಪಿ ಲೋಕನಾಥ್ ಬೆಹ್ರಾ, ಮಹಿಳೆಗೆ ಹಾವು ಕಚ್ಚಿದ ಹಿನ್ನೆಲೆಯಲ್ಲಿ ಹಾವಿನ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಇದರ ಡಿಎನ್‌ಎ ಸಂಗ್ರಹಿಸಲಾಗಿದ್ದು, ತನಿಖೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.