ವಿಶಾಖಪಟ್ಟಣಂ (ಆಂಧ್ರಪ್ರದೇಶ):ಆ ತಾಯಿಗೆ ಇಬ್ಬರು ವಿಶೇಷ ಚೇತನ ಮಕ್ಕಳಿದ್ದವು. ಎಲ್ಲ ಮಕ್ಕಳಂತೆ ಆಟವಾಡಿ, ನಲಿಯಬೇಕೆಂಬ ಆಸೆ ಆ ತಾಯಿಗಿತ್ತು. ಆದ್ರೆ ತಾಯಿಯ ಕೂಗು ಆ ದೇವರಿಗೆ ಮುಟ್ಟಲೇ ಇಲ್ಲ. ನನ್ನ ಮಕ್ಕಳು ಎಲ್ಲರಂತೆ ಸಾಧಾರಣವಾಗಿ ಆಗಲು ಅಸಾಧ್ಯ ಎಂದು ತಿಳಿದ ಆ ತಾಯಿ ಮಕ್ಕಳಿಗೆ ವಿಷವುಣಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಶ್ರೀಕಾಕುಳಂ ಜಿಲ್ಲೆಯ ಬಾರುವ ಗ್ರಾಮದ ಬುರಕಾಯಲ ಸತ್ಯನಾರಾಯಣ, ಅನಿತಾ ದಂಪತಿಗೆ ರಮ್ಯಾಶ್ರೀ (8), ಉಮಾ ಮಹೇಶ್ವರ (6) ಎಂಬ ಇಬ್ಬರು ವಿಶೇಷಚೇತನ ಮಕ್ಕಳಿದ್ದರು. ಸತ್ಯನಾರಾಯಣ ಜೀವನೋಪಾಯಕ್ಕಾಗಿ ವಿಶಾಖಪಟ್ಟಣಂದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಶ್ರೀಕಾಕುಳಂ ಜಿಲ್ಲೆಯ ಪೈಡಿ ಭೀಮಾವರಂನ ಔಷಧ ರೆಡಿಮಾಡುವ ಕಂಪನಿಗೆ ಸೇರಿದರು.
ಹೆತ್ತ ತಾಯಿ ಅನಿತಾಗೆ ಮಕ್ಕಳದೇ ಚಿಂತೆಯಾಗಿತ್ತು. ಎಲ್ಲ ಮಕ್ಕಳಂತೆ ನನ್ನ ಮಕ್ಕಳ ಸಹ ಆಟವಾಡಬೇಕು, ನಲಿಬೇಕು ಎಂಬ ಆಸೆ ಅನಿತಾ ಅವರದ್ದಾಗಿತ್ತು. ಅದರಂತೆ ಅನಿತಾ ಎಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಅನಿತಾ ಮೆಲ್ಲನೇ ಕುಗ್ಗುತ್ತಾ ಬಂದಳು. ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲ ಅಂತಾ ಅನಿತಾ ನೋವುಣ್ಣುತ್ತಿದ್ದಳು.
ಭಾನುವಾರ ವಿಶಾಖಪಟ್ಟಣಂ ಜಿಲ್ಲೆಯ ಗೊಲ್ಲನಾರಾಯಣಪುರಂನ ನೂಕಾಂಬಿಕ ದೇವಾಲಯಕ್ಕೆ ಮಕ್ಕಳೊಂದಿಗೆ ಅನಿತಾ ತೆರಳಿದ್ದಾರೆ. ದೇವಾಲಯದಲ್ಲೇ ಮಕ್ಕಳಿಗೆ ವಿಷವುಣಿಸಿ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಮನೆಗೆ ಬಂದ ಸತ್ಯನಾರಾಯಣ ಇವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸುದ್ದಿ ತಿಳಿದು ದೇವಾಲಯದ ಬಳಿ ತೆರಳಿ ನೋಡಿದಾಗ ಸತ್ಯನಾರಾಯಣನಿಗೆ ದಿಗ್ಬ್ರಾಂತಿಯಾಗಿದೆ.
ಮಕ್ಕಳು, ಹೆಂಡ್ತಿಯ ಶವ ನೋಡಿದ ಸತ್ಯನಾರಾಯಣ ಆಕ್ರಂದನ ಮುಗಿಲು ಮುಟ್ಟಿತು. ಈ ಘಟನೆ ಕುರಿತು ಪೆಂದುರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.