ವಾಷಿಂಗ್ಟನ್: ಜಪಾನ್‌ನ ಹಿರೋಷಿಮಾದಲ್ಲಿ ಮೇ 19 ರಿಂದ 21 ರವರೆಗೆ ನಡೆಯಲಿರುವ ಜಿ–7 ನಾಯಕರ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾಗವಹಿಸಲಿದ್ದಾರೆ. ಈ ಸಂಬಂಧ ಶ್ವೇತಭವನ ಪ್ರಕಟಣೆ ಹೊರಡಿಸಿದೆ. ರಷ್ಯಾ–ಉಕ್ರೇನ್ ಯುದ್ದ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳ ಸೇರಿದಂತೆ ಆರ್ಥಿಕತೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಜಿ–7 ಶೃಂಗಸಭೆಯಲ್ಲಿ ನಾಯಕರು ಚರ್ಚೆ ನಡೆಸಲಿದ್ದಾರೆ.
ಏನಿದು ಜಿ–7 ಶೃಂಗಸಭೆ?:ಜಗತ್ತಿನ ಪ್ರಮುಖ ಆರ್ಥಿಕ ಬಲಾಢ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್ ದೇಶಗಳು ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟವೇ ಜಿ–7. ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಇತರ ಆಹ್ವಾನಿತ ದೇಶಗಳೊಂದಿಗೆ ಪ್ರತಿ ವರ್ಷ ವಾರ್ಷಿಕ ಜಿ–7 ಶೃಂಗಸಭೆಯನ್ನು ನಡೆಸುತ್ತವೆ.
ಜಿ–7 ಸದಸ್ಯ ರಾಷ್ಟ್ರಗಳ ಒಟ್ಟಾರೆ ಜಾಗತಿಕ ಜಿಡಿಪಿ ಶೇ. 40ರಷ್ಟಿದೆ. ವಿಶ್ವದ ಜನಸಂಖ್ಯೆಯ ಶೇ.10ರಷ್ಟನ್ನು ಈ ದೇಶಗಳು ಪ್ರತಿನಿಧಿಸುತ್ತವೆ. ನ್ಯಾಟೋ ಗುಂಪಿನಂತೆ ಜಿ–7ಗೆ ಯಾವುದೇ ಕಾನೂನು ಅಸ್ತಿತ್ವ, ಶಾಶ್ವತ ಸಚಿವಾಲಯ ಅಥವಾ ಅಧಿಕೃತ ಸದಸ್ಯರಿಲ್ಲ. ಈ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು, ಮಾಡಿಕೊಳ್ಳಲಾದ ಒಪ್ಪಂದಗಳನ್ನು ಆಯಾ ದೇಶಗಳ ಆಡಳಿತ ಮಂಡಳಿಗಳು ಅನುಮೋದಿಸಬೇಕಾಗುತ್ತದೆ.
ಯುರೋಪಿಯನ್ ದೇಶಗಳ ಜಿ ಗುಂಪು 1975ರಲ್ಲಿ ಅಸ್ತಿತ್ವಕ್ಕೆ ಬಂದಿತು. 1977ರಲ್ಲಿ ಕೆನಡಾ ದೇಶ ಈ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರವೇ ಜಿ–7 ಗುಂಪು ರಚನೆಯಾಯಿತು. ನಂತರ ನಿಯಮಿತವಾಗಿ ವಾರ್ಷಿಕ ಶೃಂಗಸಭೆಗಳು ನಡೆದವು. 1998ರಲ್ಲಿ ರಷ್ಯಾ ಈ ಗುಂಪಿಗೆ ಸೇರ್ಪಡೆಯಾಯಿತು. ಆಗ ಸದಸ್ಯ ದೇಶಗಳ ಸಂಖ್ಯೆ 8ಕ್ಕೆ ಏರಿಕೆಯಾಯಿತು. 2014ರವರೆಗೂ ಜಿ–8 ಎಂದೇ ಕರೆಯಲಾಗುತ್ತಿತ್ತು. ಆದರೆ, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗ ಆ ದೇಶವನ್ನು ಗುಂಪಿನಿಂದ ಹೊರಹಾಕಲಾಯಿತು. ಆಗ ಮತ್ತೆ ಜಿ ಗುಂಪಿನಲ್ಲಿ 7 ದೇಶಗಳು ಉಳಿದಿವೆ.
ಕ್ವಾಡ್ ಶೃಂಗಸಭೆ: ಮೇ 24 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಬೈಡನ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ, ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಅಲ್ಬೆನೀಸ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಕ್ವಾಡ್ ನಾಯಕರು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಉತ್ತಮ ಗುಣಮಟ್ಟದ ಮೂಲಸೌಕರ್ಯ, ಜಾಗತಿಕ ಆರೋಗ್ಯ, ಹವಾಮಾನ ಬದಲಾವಣೆ ಕುರಿತು ಮಾತುಕತೆ ನಡೆಸಲಿದ್ದಾರೆ.