ಟೋಕಿಯೊ(ಜಪಾನ್): ಟೋಕಿಯೊದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಸ್ನೇಹವನ್ನು ಗಟ್ಟಿಗಳಿಸುವ ಸಂಗತಿಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಈ ಸಂದರ್ಭದಲ್ಲಿ ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ-ಅಮೆರಿಕ ಸ್ನೇಹ ಸಂಬಂಧ ಉತ್ತಮ ಶಕ್ತಿಯಾಗಿ ಮುಂದುವರೆಯುವ ವಿಶ್ವಾಸವಿದೆ ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಮಾತನಾಡಿ, ಕ್ವಾಡ್ ಶೃಂಗಸಭೆಯಲ್ಲಿ ಸಕಾರಾತ್ಮಕ ನೆಲೆಯಲ್ಲಿ ನಾವು ಒಂದಾಗಿದ್ದೇವೆ. ನಿಜವಾದ ಅರ್ಥದಲ್ಲಿ ಭಾರತ ಮತ್ತು ಅಮೆರಿಕದ್ದು ಪರಸ್ಪರ ನಂಬಿಕೆಯ ಪಾಲುದಾರಿಕೆಯಾಗಿದೆ. ನಮ್ಮ ಸಾಮಾನ್ಯ ಆಸಕ್ತಿಗಳು ಮತ್ತು ಮೌಲ್ಯಗಳು ಈ ಬಂಧವನ್ನು ಬಲಪಡಿಸುವುದೇ ಆಗಿದೆ ಎಂದು ತಿಳಿಸಿದರು.
ನಮ್ಮ ಜನರ ನಡುವಿನ ಸಂಬಂಧಗಳು ಮತ್ತು ಬಲವಾದ ಆರ್ಥಿಕ ಸಹಕಾರವು ನಮ್ಮ ಪಾಲುದಾರಿಕೆಯನ್ನು ಅನನ್ಯವಾಗಿಸುತ್ತದೆ. ನಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಸ್ಥಿರವಾಗಿ ಏರಿಕೆಯಾಗುತ್ತಿವೆ. ಆದರೆ, ಅವುಗಳು ಇನ್ನೂ ನಮ್ಮ ಸಾಮರ್ಥ್ಯಕ್ಕಿಂತ ಕೆಳಗಿವೆ ಎನ್ನುವ ಮೂಲಕ ಪ್ರಧಾನಿ ಮೋದಿ ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಹಾಗೂ ಹೂಡಿಕೆ ಹೆಚ್ಚಿಸುವ ಆಶಯ ವ್ಯಕ್ತಪಡಿಸಿದರು.
ಭಾರತ- ಅಮೆರಿಕ ಹೂಡಿಕೆ ಪ್ರೋತ್ಸಾಹ ಒಪ್ಪಂದದ ತೀರ್ಮಾನದೊಂದಿಗೆ, ನಾವು ದ್ವಿಪಕ್ಷೀಯ ಹೂಡಿಕೆಯಲ್ಲಿ ಗಟ್ಟಿಯಾದ ಪ್ರಗತಿಯನ್ನು ಕಾಣುತ್ತೇವೆ. ನಾವು ತಂತ್ರಜ್ಞಾನದ ನೆಲೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುತ್ತಿದ್ದೇವೆ. ಜಾಗತಿಕ ವಿಷಯಗಳಲ್ಲೂ ನಿಕಟವಾಗಿ ಸಹಕರಿಸುತ್ತೇವೆ. ಇಂಡೋ-ಪೆಸಿಫಿಕ್ ಬಗ್ಗೆ ಭಾರತ ಮತ್ತು ಯುಎಸ್ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿವೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ:ಇಂಡೋ-ಫೆಸಿಫಿಕ್ಗಾಗಿ ಕ್ವಾಡ್‌ನಿಂದ ರಚನಾತ್ಮಕ ಕಾರ್ಯಸೂಚಿ: ಪ್ರಧಾನಿ ಮೋದಿ