ವಾಷಿಂಗ್ಟನ್:ಕ್ಯಾನ್ಸರ್ನಿಂದ ಬಳಲುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಆಸ್ಪತ್ರೆಯ ಬದಲಾಗಿ ಮನೆಯ ಆರೈಕೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ನಿರಂತರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಅಧ್ಯಕ್ಷ ಜೀವತಾವಧಿಯ ಉಳಿದ ಸಮಯವನ್ನು ಮನೆಯವರೊಂದಿಗೆ ಕೂಡಿ ಕಳೆಯಲು ಇಚ್ಚಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
98 ವರ್ಷದ ಜಿಮ್ಮಿ ಕಾರ್ಟರ್ ದೇಶದ 39 ನೇ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇವರು ಅಮೆರಿಕದ ಅಧ್ಯಕ್ಷರಲ್ಲಿ ಜೀವಂತವಾಗಿರುವ ಅತಿ ಹಿರಿಯ ಮಾಜಿ ಅಧ್ಯಕ್ಷ. ಜಾರ್ಜ್ಬುಷ್ 2018 ರಲ್ಲಿ ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಾರ್ಟರ್‌ಗೆ ಮನೆಯಲ್ಲಿ ಕುಟುಂಬದ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆಯ ಬೆಂಬಲ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
"ಅನಾರೋಗ್ಯವಿದ್ದರೂ ಅಜ್ಜ ಉಳಿದ ಸಮಯವನ್ನು ಸಂತೋಷವಾಗಿ ಮನೆಯಲ್ಲೇ ಕಳೆಯಲು ನಿರ್ಧರಿಸಿದ್ದಾರೆ. ಹೀಗಾಗಿ ಅವರನ್ನು ಮನೆಗೆ ಕರೆತರಲಾಗಿದೆ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಮನೆಯವರ ಆರೈಕೆ ಮುಂದುವರಿಯಲಿದೆ. ಹೆಚ್ಚುವರಿ ವೈದ್ಯಕೀಯ ಬೆಂಬಲವೂ ಇರಲಿದೆ" ಎಂದು ಜಾರ್ಜಿಯಾದ ಸೆನೆಟರ್ ಮತ್ತು ಕಾರ್ಟರ್ರ ಮೊಮ್ಮಗ ಜೇಸನ್ ಕಾರ್ಟರ್ ಮಾಹಿತಿ ನೀಡಿದ್ದಾರೆ.
ಕಾರ್ಟರ್ ಅವರು ಕೋವಿಡ್ ಸಾಂಕ್ರಾಮಿಕದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಆದರೂ, ವಿಶ್ವದ ರಾಜಕೀಯ ಆಗುಹೋಗುಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದರು. ತದನಂತರ ಅನಾರೋಗ್ಯ ಉಲ್ಬಣಗೊಂಡು ಚಿಕಿತ್ಸೆಯಲ್ಲೇ ಮುಂದುವರಿದ್ದಾರೆ.