ಕೀವ್(ಉಕ್ರೇನ್): ರಷ್ಯಾವು ಉಕ್ರೇನ್ ಮೇಲೆ ಯುದ್ಧ ಸಾರಿ ಒಂದು ತಿಂಗಳು ಪೂರ್ಣಗೊಂಡಿವೆ. ರಷ್ಯಾ ನಡೆಸಿದ ಯುದ್ಧಕ್ಕೆ ಜಗತ್ತಿನಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದರೂ ಅದಕ್ಕೆ ಜಗ್ಗದೇ ವ್ಲಾಡಿಮಿರ್ ಪುಟಿನ್ ನಿರಂತರ ದಾಳಿ ಮುಂದುವರೆಸಿದ್ದಾರೆ. ಈ ಬೆನ್ನಲ್ಲೇ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ರಷ್ಯಾಕ್ಕೆ ಯುದ್ಧ ಅಂತ್ಯಗೊಳಿಸಲು ಮನವಿ ಮಾಡಿದ್ದು, ಮಾತುಕತೆಗೆ ಬರುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧದಿಂದ ಭಾರಿ ಹಾನಿಯುಂಟಾಗಿದ್ದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಇನ್ನೊಂದೆಡೆ, ರಷ್ಯಾ ದಾಳಿಗೆ ಹೆದರಿ ಹಲವಾರು ಮಂದಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಹಾಗಾಗಿ, ಝೆಲೆನ್ಸ್ಕಿ ಮತ್ತೊಮ್ಮೆ ರಷ್ಯಾಕ್ಕೆ ಮಾತುಕತೆ ನಡೆಸಿ, ಯುದ್ಧ ಕೊನೆಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಉಕ್ರೇನ್ ಒಂದಿಂಚು ಪ್ರದೇಶವನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ರಷ್ಯಾದ ಜನರಲ್ ಸ್ಟಾಫ್‌ನ ಡೆಪ್ಯುಟಿ ಚೀಫ್ ಕರ್ನಲ್ ಜನರಲ್ ಸೆರ್ಗೆಯ್ ರುಡ್‌ಸ್ಕೋಯ್‌ಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ರಷ್ಯಾದ ಪಡೆಗಳು ಈಗ ಡಾನ್‌ಬಾಸ್ ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಗಿವೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ವಿಡಿಯೋ ಸಂದೇಶ ಹಂಚಿಕೊಂಡಿರುವ ಉಕ್ರೇನ್ ವಿದೇಶಾಂಗ ಸಚಿವಾಲಯ, ರಷ್ಯಾದ ಯುದ್ಧವು ಕೇವಲ ಯುದ್ಧವಲ್ಲ. ಉಕ್ರೇನ್ನ ಸ್ವಾತಂತ್ರ್ಯದ ವಿರುದ್ಧದ ಯುದ್ಧವಾಗಿದೆ. ಜನರ ಹಕ್ಕು ಕಸಿದುಕೊಳ್ಳುವ ಈ ಯುದ್ಧದ ವಿರುದ್ಧ ನೀವೆಲ್ಲ ನಿಲ್ಲಬೇಕು ಎಂದು ಕೇಳಿಕೊಳ್ಳುತ್ತೇನೆ. ನಿಖರವಾಗಿ ಒಂದು ತಿಂಗಳು ಮುಂದುವರೆದಿರುವ ಈ ಯುದ್ಧವನ್ನು ನಿಲ್ಲಬಯಸುವ ನೀವೆಲ್ಲ ಒಟ್ಟಾಗಿ ನಮಗೆ ಬೆಂಬಲ ನೀಡಬೇಕು, ರಷ್ಯಾ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಝೆಲೆನ್ಸ್ಕಿ ಕರೆ ನೀಡಿದ್ದರು.
ಇದನ್ನೂ ಓದಿ:ಮೇ 9ಕ್ಕೆ ರಷ್ಯಾ-ಉಕ್ರೇನ್ ಯುದ್ಧ ಮುಕ್ತಾಯ? ಇದು ಉಕ್ರೇನ್ ಸೇನೆಯ ಅಂದಾಜು