ಕೀವ್ (ಉಕ್ರೇನ್): ಮಾಸ್ಕೋ ನಿಯಂತ್ರಣದಲ್ಲಿರುವ ದಕ್ಷಿಣ ಉಕ್ರೇನ್‌ನ ಒಂದು ಭಾಗದಲ್ಲಿರುವ ಪ್ರಮುಖ ಅಣೆಕಟ್ಟು ಮತ್ತು ಜಲವಿದ್ಯುತ್ ಕೇಂದ್ರವನ್ನು ರಷ್ಯಾದ ಪಡೆಗಳು ಸ್ಫೋಟಿಸಿರುವುದಾಗಿ ಉಕ್ರೇನ್ ಮಂಗಳವಾರ ಆರೋಪಿಸಿದೆ. ಡ್ಯಾಮ್ ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ಹೊರಗೆ ಬರುತ್ತಿದ್ದು, ಇದರಿಂದ ಉಂಟಾಗಬಹುದಾದ ಬೃಹತ್ ಪ್ರವಾಹದಿಂದ ಪರಿಸರ ವಿಕೋಪ ಸಂಭವಿಸಬಹುದು ಎಂದು ಉಕ್ರೇನ್ ಆತಂಕ ವ್ಯಕ್ತಪಡಿಸಿದೆ.
ಯುದ್ಧ ನಿರತ ಎರಡೂ ದೇಶಗಳ ಅಧಿಕಾರಿಗಳು ನದಿಯ ಕೆಳಭಾಗದಲ್ಲಿರುವ ಲಕ್ಷಾಂತರ ನಿವಾಸಿಗಳು ಬೇರೆ ಕಡೆಗೆ ಸ್ಥಲಾಂತರವಾಗುವಂತೆ ಆದೇಶಿಸಿದ್ದಾರೆ. ಡ್ನಿಪ್ರೊ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾಖೋವ್ಕಾ ಅಣೆಕಟ್ಟು ಉಕ್ರೇನಿಯನ್ ಮಿಲಿಟರಿ ದಾಳಿಯಿಂದ ಹಾನಿಗೊಳಗಾಗಿದೆ ಎಂದು ರಷ್ಯಾ ಪ್ರತ್ಯಾರೋಪ ಮಾಡಿದೆ. ಏನೇ ಆದರೂ ಅಣೆಕಟ್ಟೆ ಒಡೆದಿದ್ದರಿಂದ ದೊಡ್ಡ ಪ್ರಮಾಣದ ಪ್ರತಿಕೂಲ ಪರಿಣಾಮಗಳಾಗುವ ಸಾಧ್ಯತೆಗಳಿವೆ.
ನದಿಪಾತ್ರದ ಕೆಳಭಾಗದಲ್ಲಿರುವ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿ ಹೋಗಬಹುದು, ನದಿ ಪಾತ್ರದ ಮೇಲ್ಭಾಗದಲ್ಲಿನ ಅಂತರ್ಜಲ ಮಟ್ಟ ಕುಸಿಯಬಹುದು ಹಾಗೂ ಇದರಿಂದ ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರವನ್ನು ತಂಪಾಗಿಡಲು ಅಗತ್ಯವಾದ ನೀರಿಗೆ ಕೊರತೆಯಾಗಬಹುದು. ಜೊತೆಗೆ ಸದ್ಯ ರಷ್ಯಾ ಅಧಿಕೃತವಾಗಿ ವಶಪಡಿಸಿಕೊಂಡಿರುವ ಪಶ್ಚಿಮ ಕ್ರಿಮಿಯಾದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು.
ಸದ್ಯ 16ನೇ ತಿಂಗಳಿಗೆ ಕಾಲಿಟ್ಟಿರುವ ರಷ್ಯಾ ಉಕ್ರೇನ್ ಯುದ್ಧದ ಅವಧಿಯಲ್ಲಿ ಅಣೆಕಟ್ಟೆ ಒಡೆದಿರುವುದು ರಷ್ಯಾಗೆ ಹೊಸ ಸಮಸ್ಯೆಗಳನ್ನು ಸೃಷ್ಟಿಸಬಹುದಾಗಿದೆ. ಈ ಮಧ್ಯೆ ಉಕ್ರೇನಿಯನ್ ಪಡೆಗಳು ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣದಲ್ಲಿ 1,000 ಕಿಲೋಮೀಟರ್‌ಗಿಂತಲೂ ಹೆಚ್ಚು ಮುಂಚೂಣಿಯಲ್ಲಿರುವ ಪ್ರದೇಶಗಳಲ್ಲಿ ದೀರ್ಘ ನಿರೀಕ್ಷಿತ ಪ್ರತಿದಾಳಿಯೊಂದಿಗೆ ಮುಂದುವರಿಯುತ್ತಿರುವುದು ವ್ಯಾಪಕವಾಗಿ ಕಂಡು ಬರುತ್ತಿದೆ.