ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನಿ ಯುವಕನೋರ್ವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಮೆಚ್ಚಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಯುವಕ ತನ್ನ ದೇಶದ ನಾಯಕರ ವಿರುದ್ಧ ಕಿಡಿ ಕಾರಿದ್ದಾನೆ. ಪಾಕಿಸ್ತಾನಿ ಯುಟ್ಯೂಬರ್ ಸನಾ ಅಮ್ಜದ್ ಎಂಬವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಯುವಕ, ಶೆಹಬಾಜ್ ಶರೀಫ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ದೇಶದ ದುಸ್ಥಿತಿಯ ವಿರುದ್ಧ ಹತಾಶೆ ವ್ಯಕ್ತಪಡಿಸಿದ್ದಾನೆ.
"ಒಂದು ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನವನ್ನು ಆಳುತ್ತಿದ್ದರೆ ಕಡಿಮೆ ಬೆಲೆಯಲ್ಲಿ ನಮಗೆ ಸರಕುಗಳು ದೊರೆಯುತ್ತಿದ್ದವು" ಎಂದು ಆತ ಹೇಳಿದ್ದಾನೆ. ಈ ಯುವಕನಲ್ಲಿ ಮಾಜಿ ಪತ್ರಕರ್ತೆ ಸನಾ ಅಮ್ಜದ್ ಅವರು, "ಯಾಕೆ ಇಲ್ಲಿನ ಸ್ಥಳೀಯರು ಪಾಕಿಸ್ತಾನ್ ಸೆ ಜಿಂದಾ ಭಾಗೋ ಚಾಹೆ ಇಂಡಿಯಾ ಚಲೇ ಜಾವೋ (ಪಾಕಿಸ್ತಾನದಿಂದ ಓಡಿ ಹೋಗಿ, ಭಾರತದಲ್ಲಿ ಜೀವಿಸಿ) ಎಂಬ ಘೋಷಣೆ ಕೂಗುತ್ತಿದ್ದಾರೆ" ಎಂದು ಪ್ರಶ್ನಿಸಿದ್ದು, ಅದಕ್ಕೆ ಆತ, "ನಾನು ಪಾಕಿಸ್ತಾನದಲ್ಲೇ ಹುಟ್ಟಬಾರದಿತ್ತು" ಎಂದು ಪ್ರತಿಕ್ರಿಯಿಸಿದ್ದಾನೆ.
"ಒಂದು ವೇಳೆ ಭಾರತ ವಿಭಜನೆ ಆಗದೇ ಇರುತ್ತಿದ್ದರೆ ನಮಗೆ ಅಗತ್ಯ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದವು. ಈ ಮೂಲಕ ನಮ್ಮ ಮಕ್ಕಳಿಗೆ ನಾವು ಸರಿಯಾಗಿ ಆಹಾರ ನೀಡಬಹುದಿತ್ತು. ನಾವು 20 ರೂಪಾಯಿಗೆ 1 ಕೆಜಿ ಟೊಮೆಟೊ, 150 ರೂಗೆ ಒಂದು ಕೆಜಿ ಕೋಳಿ ಮಾಂಸ ಮತ್ತು 50 ರೂಪಾಯಿಗೆ 1 ಲೀಟರ್ ಪೆಟ್ರೋಲ್ ಖರೀದಿಸುತ್ತಿದ್ದೆವು" ಎಂದು ಹೇಳಿದ್ದಾನೆ. "ನಾವು ದುರದೃಷ್ಟಕರದಿಂದ ಇಸ್ಲಾಮಿಕ್ ರಾಷ್ಟ್ರವನ್ನು ಪಡೆದಿದ್ದೇವೆ. ಆದರೆ ನಮಗೆ ಇಲ್ಲಿ ಇಸ್ಲಾಂ ಅನ್ನು ಸ್ಥಾಪಿಸಲೂ ಸಾಧ್ಯವಾಗಲಿಲ್ಲ" ಎಂದು ಅಳಲು ತೋಡಿಕೊಂಡಿದ್ದಾನೆ.