ನ್ಯೂಯಾರ್ಕ್ (ಅಮೆರಿಕ):ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಕುರಿತಾಗಿಭಾರತ-ಕೆನಡಾ ರಾಜತಾಂತ್ರಿಕ ವಿವಾದದ ಕುರಿತು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದರು. ಉತ್ತರ ಅಮೆರಿಕ ಖಂಡದ ಕೆನಡಾದಲ್ಲಿ ಭಯೋತ್ಪಾದಕರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದರು. ಇದೇ ವೇಳೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
"ಕೆಲವು ಭಯೋತ್ಪಾದಕರು ಕೆನಡಾದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ. ಕೆನಡಾದ ಪ್ರಧಾನ ಮಂತ್ರಿ ಯಾವುದೇ ಪುರಾವೆಗಳಿಲ್ಲದೆ ಕೆಲವು ಅತಿರೇಕದ ಆರೋಪಗಳನ್ನು ಮಾಡುತ್ತಿದ್ದಾರೆ. ಶ್ರೀಲಂಕಾ ಕುರಿತಾಗಿಯೂ ಅವರು ಇಂಥ ಆಧಾರರಹಿತ ಆರೋಪಗಳನ್ನು ಈ ಹಿಂದೆ ಮಾಡಿದ್ದರು. ಶ್ರೀಲಂಕಾದಲ್ಲಿ ನರಮೇಧವಿದೆ ಎನ್ನುವ ಗಂಭೀರ ಆರೋಪ ಮಾಡಿದ್ದರು. ಆದರೆ ಅದು ಸಂಪೂರ್ಣ ಸುಳ್ಳು. ನಮ್ಮ ದೇಶದಲ್ಲಿ ಯಾವುದೇ ನರಮೇಧ ನಡೆದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ" ಎಂದರು.
ಕೆನಡಾದಲ್ಲಿ ಖಲಿಸ್ತಾನಿ ಟೈಗರ್ ಫೋರ್ಸ್ನ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು ಬಂದೂಕಿನಿಂದ ಹತ್ಯೆಗೈದ ಪ್ರಕರಣದಲ್ಲಿ ಭಾರತ ಭಾಗಿಯಾಗಿದೆ ಎಂದು ಜಸ್ಟೀನ್ ಟುಡ್ರೊ ಸೆಪ್ಟೆಂಬರ್ 18ರಂದು ಆರೋಪಿಸಿದ್ದರು. ಆ ಬಳಿಕ ಕೆನಡಾ-ಭಾರತದ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ಭಯೋತ್ಪಾದಕನಾಗಿದ್ದ ನಿಜ್ಜರ್, ಜೂನ್ 18ರಂದು ಕೆನಡಾದ ಸರ್ರೆಯ ಗುರುದ್ವಾರದ ಹೊರಗೆ ಕೊಲೆಯಾಗಿದ್ದನು.
ಇದನ್ನೂ ಓದಿ:ನಿಜ್ಜರ್ ಹತ್ಯೆ: ಕೆನಡಾ ತನಿಖೆ ಮುಂದುವರೆಯಲಿ, ಅಪರಾಧಿಗಳನ್ನು ನ್ಯಾಯಾಂಗ ವ್ಯಾಪ್ತಿಗೆ ತನ್ನಿ- ಅಮೆರಿಕ
ಭಾರತದ ಪ್ರತಿಕ್ರಿಯೆ: ಈ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಎಲ್ಲಾ ಆರೋಪಗಳು ಅಸಂಬದ್ಧ ಮತ್ತು ಪ್ರಚೋದಿತ. ಕೆನಡಾ ಸಂಸತ್ತಿನಲ್ಲಿ ಪ್ರಧಾನಿ ಟ್ರುಡೊ ಭಾರತದ ವಿರುದ್ಧ ನೀಡಿರುವ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಆರೋಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ತಿಳಿಸಿತ್ತು.
ಹರ್ದೀಪ್ ಸಿಂಗ್ ನಿಜ್ಜರ್ ಯಾರು?:ಪಂಜಾಬ್ ಪೊಲೀಸರ ದಾಖಲೆಯಂತೆ, ಹರ್ದೀಪ್ ಸಿಂಗ್ ನಿಜ್ಜರ್ ಜಲಂಧರ್‌ನ ಭರ್ಸಿಂಗ್ ಪುರ ಗ್ರಾಮದ ನಿವಾಸಿಯಾಗಿದ್ದಾನೆ. 1997ರಲ್ಲಿ ಕೆನಡಾ ದೇಶಕ್ಕೆ ತೆರಳಿದ್ದ. ಅಲ್ಲಿ ತಲುಪಿದ ನಂತರ, ಪ್ಲಂಬರ್ ವೃತ್ತಿ ಪ್ರಾರಂಭಿಸಿದ್ದ. ಪಂಜಾಬ್ ರಾಜ್ಯವನ್ನು ಭಾರತದಿಂದ ಪ್ರತ್ಯೇಕಿಸಲು ಸಂಚು ರೂಪಿಸುತ್ತಿರುವ ಖಲಿಸ್ತಾನಿ ಉಗ್ರ ತಂಡ ಸೇರಿಕೊಂಡಿದ್ದನು. ಇದೇ ಹಿನ್ನೆಲೆಯಲ್ಲಿ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಎಂಬ ಸಂಘಟನೆ ಸ್ಥಾಪಿಸಿ ಭಾರತದಲ್ಲಿ ಖಲಿಸ್ತಾನಿ ಬೆಂಬಲಿಗರನ್ನು ಗುರುತಿಸಿ, ತರಬೇತಿ ನೀಡುವುದು ಮತ್ತು ಧನಸಹಾಯ ನೀಡಲು ಆರಂಭಿಸಿದ್ದನು. ನೈಜೀರಿಯಾದ ಭಯೋತ್ಪಾದಕ ಸಂಘಟನೆ 'ಸಿಕ್ ಫಾರ್ ಜಸ್ಟೀಸ್' (SJF) ಜೊತೆಗೂ ಈತ ಸಂಪರ್ಕ ಬೆಳೆಸಿದ್ದ. (ಭಾರತದಲ್ಲಿ SJF ಸಂಘಟನೆಯನ್ನು ನಿಷೇಧಿಸಲಾಗಿದೆ) ಈ ಮೂಲಕ ಭಾರತ ವಿರೋಧಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. 2020ರಲ್ಲಿ ಈತನನ್ನು ಭಾರತ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸಿತ್ತು.
ಇದನ್ನೂ ಓದಿ:'ಜಾಗರೂಕರಾಗಿರಿ': ಭಾರತದಲ್ಲಿರುವ ತನ್ನ ನಾಗರಿಕರಿಗೆ ಕೆನಡಾ ಸೂಚನೆ