ಅಂಕಾರಾ (ಟರ್ಕಿ): ಮೂರು ತಿಂಗಳ ಬೇಸಿಗೆಯ ವಿರಾಮದ ನಂತರ ಟರ್ಕಿ ಸಂಸತ್ತು ಪುನರಾರಂಭವಾಗುವ ಕೆಲವೇ ಗಂಟೆಗಳ ಮುನ್ನ ರಾಜಧಾನಿಯ ಸಚಿವಾಲಯದ ಕಟ್ಟಡದ ಮುಂದೆ ಇಬ್ಬರು ಉಗ್ರಗಾಮಿಗಳು ನುಸುಳಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ವ್ಯವಹಾರಗಳ ಸಚಿವ ಅಲಿ ಯೆರ್ಲಿಕಾಯಾ ಮಾಹಿತಿ ನೀಡಿದ್ದಾಗಿ ಅಲ್ ಜಜೀರಾ ವರದಿ ಮಾಡಿದೆ.
ಒಬ್ಬ ಭಯೋತ್ಪಾದಕ ತನ್ನನ್ನು ತಾನೇ ಸ್ಫೋಟಿಸಿಕೊಂಡ. ಇನ್ನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಅವಕಾಶವನ್ನು ಪಡೆಯುವ ಮೊದಲು ತಲೆಗೆ ಗುಂಡು ಹಾರಿಸಿಕೊಂಡ. ಈ ಹೊತ್ತಿಗೆ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ನಮ್ಮ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಚಿವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ನಮ್ಮ ವೀರರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಲಘು ವಾಣಿಜ್ಯ ವಾಹನದೊಂದಿಗೆ ಇಬ್ಬರು ಉಗ್ರರು ಬಂದಿದ್ದರು. ನಮ್ಮ ಪೊಲೀಸ್ ಅಧಿಕಾರಿಗಳು, ತಮ್ಮ ಸಮಯ ಪ್ರಜ್ಞೆಯಿಂದ ಭಯೋತ್ಪಾದಕರು ವಾಹನದಿಂದ ಹೊರಬಂದ ತಕ್ಷಣ ಹಿಮ್ಮಟ್ಟಿಸಿದರು ಎಂದು ಯೆರ್ಲಿಕಾಯಾ ವಿವರಣೆ ನೀಡಿದ್ದಾರೆ.
ದಾಳಿಯ ಹಿಂದೆ ಯಾರ ಕೈವಾಡವಿದೆ ಎಂದು ಸಚಿವರು ತಿಳಿಸಿಲ್ಲ. ತಕ್ಷಣದ ಹೊಣೆಗಾರಿಕೆಯನ್ನು ಯಾರೂ ತೆಗೆದುಕೊಂಡಿಲ್ಲ. ಕುರ್ದಿಶ್ ಮತ್ತು ಎಡಪಂಥೀಯ ಉಗ್ರಗಾಮಿ ಗುಂಪುಗಳು ಹಾಗೂ ಇಸ್ಲಾಮಿಕ್ ಸ್ಟೇಟ್ ಗುಂಪು ಈ ಹಿಂದೆ ದೇಶಾದ್ಯಂತ ಮಾರಣಾಂತಿಕ ದಾಳಿಗಳನ್ನು ನಡೆಸಿವೆ ಎನ್ನಲಾಗುತ್ತಿದೆ.
ಭಯೋತ್ಪಾದನೆ, ಅವರ ಸಹಯೋಗಿಗಳು, (ಮಾದಕ) ವ್ಯಾಪಾರಿಗಳು, ಗ್ಯಾಂಗ್‌ಗಳು ಮತ್ತು ಸಂಘಟಿತ ಅಪರಾಧ ಸಂಘಟನೆಗಳ ವಿರುದ್ಧ ನಮ್ಮ ಹೋರಾಟ ದೃಢಸಂಕಲ್ಪದೊಂದಿಗೆ ಮುಂದುವರಿಯುತ್ತದೆ. ಭಯೋತ್ಪಾದನೆಯನ್ನು ನಿರ್ನಾಮ ಮಾಡುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ, ನಾಗರಿಕರ ಶಾಂತಿ ಮತ್ತು ಭದ್ರತೆಯನ್ನು ಗುರಿಯಾಗಿಸಿಕೊಂಡ ಕಿಡಿಗೇಡಿಗಳು ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಅವರು ಎಂದಿಗೂ ಸಾಧಿಸುವುದಿಲ್ಲ ಎಂದಿದ್ದಾರೆ. ದಾಳಿಗಳಿಂದ ದೇಶದ ದಕ್ಷಿಣ ಗಡಿಯನ್ನು ಸುರಕ್ಷಿತವಾಗಿರಿಸಲು ಸಿರಿಯಾದೊಂದಿಗಿನ ಗಡಿಯಲ್ಲಿ 20 ಮೈಲಿ ಸುರಕ್ಷಿತ ವಲಯ ರಚಿಸುವ ತನ್ನ ಸರ್ಕಾರದ ಗುರಿಯನ್ನು ಅಧ್ಯಕ್ಷರು ಪುನರುಚ್ಚರಿಸಿದರು.
ಆತ್ಮಾಹುತಿ ಬಾಂಬ್ ಸ್ಫೋಟದ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಗಳಿಗೆ ತಕ್ಷಣದ ಆದ್ಯತೆ ನೀಡಲಾಗಿದೆ. ತನಿಖೆ ನಡೆಯುತ್ತಿದೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಕಳೆದ ಜುಲೈನಲ್ಲಿ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಇಸ್ಲಾಮಿಸ್ಟ್ ಪಕ್ಷದ ರಾಜಕೀಯ ಸಮಾವೇಶದ ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆದಿದ್ದು 44 ಜನರು ಸಾವಿಗೀಡಾಗಿದ್ದರು. ಆರಂಭಿಕ ತನಿಖೆಯಲ್ಲಿ ನಿಷೇಧಿತ ಸಂಘಟನೆ ದೇಶ್ (ಐಸಿಸ್) ಭಾಗಿಯಾಗಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ:ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಲು ಯತ್ನ; ಮುಲ್ತಾನ್‌ನಲ್ಲಿ 16 ಪಾಕಿಸ್ತಾನಿ ಭಿಕ್ಷುಕರ ಬಂಧನ