ಅಥೆನ್ಸ್: ಜೂನ್ 14 ರಂದು ನೂರಾರು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮೀನುಗಾರಿಕಾ ದೋಣಿಯೊಂದು ಗ್ರೀಸ್ ಕರಾವಳಿಯಲ್ಲಿ ಮುಳುಗಿದ ಬಳಿಕ ಸುಮಾರು 500 ಜನರು ನಾಪತ್ತೆಯಾಗಿದ್ದಾರೆ ಎಂದು ಅಮೆರಿಕ ಏಜೆನ್ಸಿಗಳು ತಿಳಿಸಿವೆ. ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಮತ್ತು ಯುಎನ್ ನಿರಾಶ್ರಿತರ ಸಂಸ್ಥೆ (ಯುಎನ್‌ಎಚ್‌ಸಿಆರ್) ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ದೋಣಿಯಲ್ಲಿದ್ದ ಜನರ ಸಂಖ್ಯೆ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ 400 ರಿಂದ 750 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ.
ನೈಋತ್ಯ ಕರಾವಳಿಯಿಂದ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ದೋಣಿ ಮುಳುಗಿದ ಸ್ಥಳದಿಂದ ರಕ್ಷಣಾ ತಂಡದವರು ಶೋಧ ಕಾರ್ಯ ಪ್ರಾರಂಭಿಸಿದ್ದರು. ಇಲ್ಲಿಯವರೆಗೆ 104 ಜನರನ್ನು ರಕ್ಷಿಸಲಾಗಿದೆ ಮತ್ತು 78 ಮೃತದೇಹಗಳು ಪತ್ತೆಯಾಗಿವೆ, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ಜೂನ್ 14 ರ ಬೆಳಗ್ಗೆ ದೋಣಿ ಮುಳುಗಿದ ನಂತರ ಗ್ರೀಕ್ ಹೆಲೆನಿಕ್ ಕೋಸ್ಟ್ ಗಾರ್ಡ್ ದೊಡ್ಡ ಪ್ರಮಾಣದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಸಮುದ್ರದ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ ಜನರನ್ನು ರಕ್ಷಿಸುವುದು ಅಂತಾರಾಷ್ಟ್ರೀಯ ಕಡಲ ಕಾನೂನಿನ ಮೂಲ ನಿಯಮವಾಗಿದೆ. ರಾಷ್ಟ್ರೀಯತೆಯನ್ನು ಲೆಕ್ಕಿಸದೆಯೇ ಹಡಗು ಮಾಲೀಕರು ಮತ್ತು ರಾಜ್ಯಗಳೆರಡೂ ಸಮುದ್ರದಲ್ಲಿ ಸಂಕಟದಲ್ಲಿರುವವರಿಗೆ ಸಹಾಯ ಮಾಡುವುದು ಬಾಧ್ಯತೆಯಾಗಿದೆ.
ಇದನ್ನೂ ಓದಿ :ಕೇರಳದಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಡೆ : 18 ಮಂದಿ ದುರ್ಮರಣ