ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಮತ್ತು ಬ್ರೆಜಿಲ್ ಅರ್ಹ ಅಭ್ಯರ್ಥಿಗಳು ಎನ್ನುವ ಮೂಲಕ ರಷ್ಯಾ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಯುಎನ್ ಜನರಲ್ ಅಸೆಂಬ್ಲಿಯ 77 ನೇ ಸಾಮಾನ್ಯ ಸಭೆಯಲ್ಲಿ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಶನಿವಾರ ಭಾರತಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಯುಎನ್ ಮತ್ತು ಭದ್ರತಾ ಮಂಡಳಿ ಸಮಕಾಲೀನ ವಾಸ್ತವಗಳಿಗೆ ತಕ್ಕಂತೆ ನಡೆಯಬೇಕು ಎಂದು ಹೇಳಿದರು. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ರಾಷ್ಟ್ರಗಳನ್ನು ಸೇರಿಸಿಕೊಳ್ಳುವ ಮೂಲಕ ಭದ್ರತಾ ಮಂಡಳಿಯನ್ನು ಮತ್ತಷ್ಟು ಪ್ರಜಾಸತ್ತಾತ್ಮಕವಾಗಿಸುವುದನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.
ಭಾರತ ಮತ್ತು ಬ್ರೆಜಿಲ್ ಪ್ರಮುಖ ಅಂತಾರಾಷ್ಟ್ರೀಯ ಪಾಲುದಾರರು ಹಾಗೂ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಅವರು ಅರ್ಹರು ಎಂದಿದ್ದಾರೆ. ಭದ್ರತಾ ಮಂಡಳಿಯ ತುರ್ತು ದೀರ್ಘಾವಧಿಯ ಸುಧಾರಣೆಗೆ ಪ್ರಯತ್ನಿಸುತ್ತಿರುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. ಹಾಗಾಗಿ ಭಾರತ ಖಾಯಂ ಸದಸ್ಯ ರಾಷ್ಟ್ರವಾಗಬಹುದು ಎಂದು ಅವರು ಒತ್ತಾಯಿಸಿದರು.