ಎಲ್ವಿವ್: ದಿನದಿಂದ ದಿನಕ್ಕೆ ರಷ್ಯಾ-ಉಕ್ರೇನ್ ಯುದ್ಧ ತೀವ್ರತೆ ಪಡೆದುಕೊಳ್ಳುತ್ತಿದೆ. ಉಕ್ರೇನ್ ಗಡಿಗೆ ಕೇವಲ 45 ಮೈಲಿ ದೂರದಲ್ಲಿರುವ ಪೊಲೆಂಡ್ ರಾಜಧಾನಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಬೆನ್ನಲ್ಲೇ ಉಕ್ರೇನ್ನ ಎಲ್ವಿವ್ ನಗರದ ಮೇಲೆ ಶನಿವಾರ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಈ ವೈಮಾನಿಕ ದಾಳಿಯು ನಗರವನ್ನೇ ಬೆಚ್ಚಿಬೀಳಿಸಿದೆ.
ಉಕ್ರೇನ್ನ ಇತರೆ ಭಾಗಗಳಿಂದ ಪಲಾಯನ ಮಾಡುವವರಿಗೆ ಎಲ್ವಿವ್ ನಗರ ಆಶ್ರಯತಾಣವಾಗಿತ್ತು. ಇದೀಗ ಇಲ್ಲೂ ರಾಕೆಟ್ ದಾಳಿ ಪ್ರಾರಂಭವಾಗಿದ್ದು ಇದು ಸುರಕ್ಷಿತ ಸ್ಥಳವಲ್ಲವೆಂದು ಭಾವಿಸಿ, ಅನೇಕರು ಹತ್ತಿರದ ಪೊಲೆಂಡ್‌ಗೆ ವಲಸೆ ಹೋಗುತ್ತಿದ್ದಾರೆ. ಮೊದಲ ಸ್ಫೋಟ ಸಂಭವಿಸಿದ ನಗರದ ಈಶಾನ್ಯ ಹೊರವಲಯದ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಗಂಟೆಗಟ್ಟಲೆ ಹೊರಹೊಮ್ಮಿದ್ದು, ತದನಂತರ ಎರಡನೇ ಸ್ಫೋಟ ಉಂಟಾಗಿದೆ.