ರೇಕ್ ಜಾವಿಕ್ (ಐಸ್ಲ್ಯಾಂಡ್) : ಇತ್ತೀಚಿನ ಸರಣಿ ಭೂಕಂಪಗಳ ನಂತರ ಯಾವುದೇ ಕ್ಷಣದಲ್ಲಿ ಜ್ವಾಲಾಮುಖಿ ಸ್ಫೋಟದ ಸಾಧ್ಯತೆಯ ಹಿನ್ನೆಲೆಯಲ್ಲಿ ಐಸ್ಲ್ಯಾಂಡ್ನಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ನೈಋತ್ಯ ಪಟ್ಟಣ ಗ್ರೈಂಡವಿಕ್ನಲ್ಲಿ ವಾಸಿಸುವ 4000 ಜನರು ಮುನ್ನೆಚ್ಚರಿಕೆಯಾಗಿ ಊರು ತೊರೆಯುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ಜ್ವಾಲಾಮುಖಿ ಸ್ಫೋಟಿಸುವುದು ಬಹುತೇಕ ಸಾಧ್ಯ ಎಂದು ಐಸ್ಲ್ಯಾಂಡ್ ಹವಾಮಾನ ಕಚೇರಿ (ಐಎಂಒ) ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಭಾನುವಾರ ಬೆಳಗ್ಗೆಯಿಂದ ರೇಕ್ಜಾನೆಸ್ ಪರ್ಯಾಯ ದ್ವೀಪದಲ್ಲಿ ಅಥವಾ ಅದರ ಹೊರಗೆ ಸ್ಫೋಟದ ಸಂಭವನೀಯತೆ ಹೆಚ್ಚಾಗಿದೆ ಮತ್ತು ಮುಂದಿನ ಕೆಲ ದಿನಗಳಲ್ಲಿ ಯಾವುದೇ ಸಮಯದಲ್ಲಿ ಸ್ಫೋಟ ಪ್ರಾರಂಭವಾಗಬಹುದು ಎಂದು ಐಎಂಒ ಹೇಳಿಕೆಯಲ್ಲಿ ತಿಳಿಸಿದೆ. ರೇಕ್ಜಾನೆಸ್ ಪರ್ಯಾಯ ದ್ವೀಪದಲ್ಲಿ 2021 ರಲ್ಲಿ ಜ್ವಾಲಾಮುಖಿ ಸ್ಫೋಟವಾಗಿತ್ತು. ಇದಕ್ಕೂ ಮುನ್ನ 800 ವರ್ಷಗಳ ಕಾಲ ಈ ಜ್ವಾಲಾಮುಖಿ ಸುಪ್ತವಾಗಿತ್ತು. ಅಕ್ಟೋಬರ್ನಿಂದ ನೈಋತ್ಯ ಐಸ್ಲ್ಯಾಂಡ್ನಲ್ಲಿ 20,000 ಕ್ಕೂ ಹೆಚ್ಚು ಭೂಕಂಪಗಳು ದಾಖಲಾಗಿವೆ.
ಶಿಲಾಪದರದ ಸುರಂಗ ಅಥವಾ ಕರಗಿದ ಬಂಡೆಯು 800 ಮೀಟರ್ ಗಿಂತ ಕಡಿಮೆ ಆಳದಲ್ಲಿ ಇದೆ ಎಂದು ಅಂದಾಜಿಸಲಾಗಿದೆ ಮತ್ತು ಅದು ಈಶಾನ್ಯಕ್ಕೆ ಗ್ರೈಂಡವಿಕ್ ಮೂಲಕ ಸುಮಾರು 10 ಕಿ.ಮೀ ಒಳನಾಡಿನಲ್ಲಿ ವಿಸ್ತರಿಸಿದೆ ಎಂದು ಐಎಂಒ ಹೇಳಿದೆ. ನವೆಂಬರ್ 9 ರಂದು, ಈ ಪ್ರದೇಶದಲ್ಲಿ ಹೆಚ್ಚಿದ ಭೂಕಂಪನ ಚಟುವಟಿಕೆಗಳಿಂದಾಗಿ ಬ್ಲೂ ಲಗೂನ್ ಲ್ಯಾಂಡ್ಮಾರ್ಕ್ ಅನ್ನು ಮುಚ್ಚಲಾಯಿತು.