ಕರ್ನಾಟಕ

karnataka

ETV Bharat / international

ಇದೆಂಥಾ ಶಾಕಿಂಗ್​​​​: ಪಾಕಿಸ್ತಾನದಲ್ಲಿ ಪೆಟ್ರೋಲ್‌ ದರ ಲೀಟರ್​ಗೆ 311 ರೂ.. - ಇಸ್ಲಾಮಾಬಾದ್

Petrol price: ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಅಪಮೌಲ್ಯದ ನಡುವೆ ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 15 ರೂಪಾಯಿ ಹೆಚ್ಚಿಸಿದೆ. ಸದ್ಯ ಪೆಟ್ರೋಲ್ ಬೆಲೆ ಈಗ ಪ್ರತಿ ಲೀಟರ್‌ಗೆ 305.36 ರೂ. ಮತ್ತು ಹೆಚ್‌ಎಸ್‌ಡಿ ಲೀಟರ್‌ಗೆ 311.84 ರೂ.ಗೆ ಲಭ್ಯವಿದೆ.

Representative image
ಪ್ರಾತಿನಿಧಿಕ ಚಿತ್ರ

By ETV Bharat Karnataka Team

Published : Sep 1, 2023, 11:16 AM IST

ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಉಸ್ತುವಾರಿ ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ 14.91 ಮತ್ತು ಹೈಸ್ಪೀಡ್ ಡೀಸೆಲ್ (ಹೆಚ್‌ಎಸ್‌ಡಿ) ಬೆಲೆಯನ್ನು ಲೀಟರ್‌ಗೆ ರೂ 18.44 ರಷ್ಟು ಹೆಚ್ಚಿಸಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ 305.36 ಮತ್ತು ಹೆಚ್‌ಎಸ್‌ಡಿ ಪೆಟ್ರೋಲ್​ ಲೀಟರ್‌ಗೆ 311.84 ರೂಪಾಯಿ ಆಗಿದೆ ಎಂದು ಹಣಕಾಸು ಸಚಿವಾಲಯ ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದೆ.

ಸೀಮೆ ಎಣ್ಣೆ ಹಾಗೂ ಡೀಸೆಲ್ ತೈಲದ ದರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ. ಆ.15 ರಂದು ಮಧ್ಯಂತರ ಸರ್ಕಾರ ಪ್ರತಿ ಲೀಟರ್‌ಗೆ 20 ರೂ.ವರೆಗೆ ಇಂಧನ ಬೆಲೆಯನ್ನು ಹೆಚ್ಚಿಸಿತ್ತು. ಈ ಭಾರಿ ಏರಿಕೆ ನಡುವೆಯೇ ಇದೀಗ ಮತ್ತೆ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯು ಅಸ್ತಿತ್ವದಲ್ಲಿರುವ ತೆರಿಗೆ ದರಗಳು ಮತ್ತು ಆಮದು ಸಮಾನತೆಯ ಬೆಲೆಗಳನ್ನು ಆಧರಿಸಿದೆ. ಮುಖ್ಯವಾಗಿ ಕರೆನ್ಸಿ ಅಪಮೌಲ್ಯ ಮತ್ತು ಅಂತರಾಷ್ಟ್ರೀಯ ತೈಲ ಬೆಲೆಗಳಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ದೇಶದಲ್ಲಿ ಶುಕ್ರವಾರ ಕೂಡ ರೂಪಾಯಿ ಮೌಲ್ಯ ನಷ್ಟ ಮುಂದುವರೆದಿದೆ. ಅಂತರಬ್ಯಾಂಕ್ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ವಿರುದ್ಧ 1.09 ರೂ. 305.54ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಉಸ್ತುವಾರಿ ಸರ್ಕಾರದ ಆಡಳಿದ ಆರಂಭದಿಂದ ರೂಪಾಯಿ ಮೌಲ್ಯ 4.6 ರಷ್ಟು ಕುಸಿದಿದೆ.

ಪಾಕಿಸ್ತಾನದ ಅಲ್ಪಾವಧಿಯ ಹಣದುಬ್ಬರ ಆಗಸ್ಟ್ 17ಕ್ಕೆ ಕೊನೆಗೊಳ್ಳುವ ವಾರದಲ್ಲಿ ವರ್ಷದಿಂದ ವರ್ಷಕ್ಕೆ 27.57 ರಷ್ಟು ಏರಿಕೆಯಾಗಿದೆ ಎಂದು ಇಲ್ಲಿನ ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿದೆ. ಹೆಚ್ಚಾಗಿ ಅದು ಪೆಟ್ರೋಲಿಯಂ ಬೆಲೆಗಳ ಏರಿಕೆಯಿಂದಾಗಿ, ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿ - ಅಂಶಗಳನ್ನು ತೋರಿಸಿದೆ. ಆದಾಗ್ಯೂ, ಹಣದುಬ್ಬರವು ಹಿಂದಿನ ವಾರದ ಶೇಕಡಾ 30.82 ಕ್ಕಿಂತ ಕಡಿಮೆಯಾಗಿದೆ. ವಾರದ ಆಧಾರದ ಮೇಲೆ, ಸಂವೇದನಾಶೀಲ ಬೆಲೆ ಸೂಚ್ಯಂಕದಿಂದ (SPI) ಮಾಪನ ಮಾಡಲಾದ ಸಾಪ್ತಾಹಿಕ ಹಣದುಬ್ಬರವು ಶೇಕಡಾ 0.78 ರಷ್ಟು ಏರಿಕೆಯಾಗಿದೆ. ಇದು ಕಳೆದ ನಾಲ್ಕು ಸತತ ವಾರಗಳಿಂದ ಏರುತ್ತಿರುವ ಪ್ರವೃತ್ತಿ ತೋರಿಸುತ್ತಿದೆ.

ಭಾರತದಲ್ಲಿ ಇಂಧನ ದರ: ಭಾರತೀಯ ತೈಲ ಕಂಪನಿಗಳು ಇಂದು (ಶುಕ್ರವಾರ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಇಂಧನ ಬೆಲೆಗಳು ಒಂದೇ ರೀತಿ ಇದೆ.

ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು?

  • ದೆಹಲಿ - ಲೀಟರ್‌ಗೆ ಪೆಟ್ರೋಲ್ ರೂ 96.72 ಮತ್ತು ಡೀಸೆಲ್ ರೂ 89.62.
  • ಮುಂಬೈ- ಪೆಟ್ರೋಲ್ ಬೆಲೆ 106.31 ಮತ್ತು ಡೀಸೆಲ್ 94.27 ರೂ.
  • ಕೋಲ್ಕತ್ತಾ- ಪೆಟ್ರೋಲ್ 106.03 ಮತ್ತು ಡೀಸೆಲ್ 92.76 ರೂ.
  • ಚೆನ್ನೈ ಪೆಟ್ರೋಲ್ ರೂ 102.63 ಮತ್ತು ಡೀಸೆಲ್ ರೂ 94.24.

ಇದನ್ನೂ ಓದಿ:ಮುಂದಿನ ವರ್ಷ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ: ಪಾಕ್ ಚುನಾವಣಾ ಆಯೋಗ

ABOUT THE AUTHOR

...view details