ಕರ್ನಾಟಕ

karnataka

ETV Bharat / international

ಮುಟ್ಟುಗೋಲು ಹಾಕಿದ ಎಲ್ಲ ಆಸ್ತಿಗಳನ್ನು ಮಾಜಿ ಪ್ರಧಾನಿ ನವಾಜ್ ಷರೀಫ್​ಗೆ ಮರಳಿಸಲು ಪಾಕ್​ ಕೋರ್ಟ್​ ಆದೇಶ - ನವಾಜ್ ಷರೀಫ್‌ ವಿರುದ್ಧ ಭ್ರಷ್ಟಾಚಾರ ಪ್ರಕರಣ

Pak ex-PM Nawaz Sharif: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ವಶಪಡಿಸಿಕೊಂಡ ಎಲ್ಲ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಮಾಜಿ ಪ್ರಧಾನಿ ನವಾಜ್ ಷರೀಫ್‌ ಅವರಿಗೆ ಮರಳಿಸುವಂತೆ ಪಾಕಿಸ್ತಾನ ನ್ಯಾಯಾಲಯ ಆದೇಶ ನೀಡಿದೆ.

ex-PM Nawaz Sharif
ಮಾಜಿ ಪ್ರಧಾನಿ ನವಾಜ್ ಷರೀಫ್

By PTI

Published : Nov 11, 2023, 6:13 PM IST

ಇಸ್ಲಾಮಾಬಾದ್​ (ಪಾಕಿಸ್ತಾನ):ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ ಅವರಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ವಶಪಡಿಸಿಕೊಂಡ ಎಲ್ಲ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ನವಾಜ್ ಷರೀಫ್‌ ಅವರಿಗೆ ಮರಳಿ ನೀಡುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಆದೇಶಿಸಿದೆ.

ನಾಲ್ಕು ವರ್ಷಗಳ ಗಡಿಪಾರು ನಂತರ ಅಕ್ಟೋಬರ್ 21ರಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಅಧ್ಯಕ್ಷರಾದ ನವಾಜ್ ಷರೀಫ್‌ ಪಾಕಿಸ್ತಾನಕ್ಕೆ ವಾಪಸ್​ ಮರಳಿದ್ದಾರೆ. 2020ರಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಷರೀಫ್‌ ಅವರನ್ನು ಪರಾರಿ ಎಂದು ಘೋಷಿಸಿದ ನಂತರ ತೋಷಖಾನಾ ವಾಹನಗಳ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮಾಲೀಕತ್ವದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯವು ಆದೇಶಿಸಿತ್ತು.

ಶುಕ್ರವಾರ ಇಸ್ಲಾಮಾಬಾದ್ ಉತ್ತರದಾಯಿತ್ವ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಬಶೀರ್, ಷರೀಫ್​ ವಿರುದ್ಧದ ತೋಷಖಾನಾ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸಿದರು. ಷರೀಫ್ ಶರಣಾಗಿರುವುದರಿಂದ ಮತ್ತು ಅವರ ಬಂಧನದ ವಾರಂಟ್ ರದ್ದುಗೊಂಡಿರುವುದರಿಂದ ಅವರ ಆಸ್ತಿಯನ್ನು ಜಪ್ತಿ ಮಾಡುವ ಆದೇಶವನ್ನು ಹಿಂಪಡೆಯಬಹುದು ಎಂದು ನ್ಯಾಯಾಧೀಶ ಬಶೀರ್ ಅವರಿಗೆ ತಿಳಿಸಲಾಯಿತು ಎಂದು ವರದಿಯಾಗಿದೆ.

ಷರೀಫ್ ಪರ ವಕೀಲ ಮಿಸ್ಬಾಹುಲ್ ಹಸನ್ ಖಾಜಿ, ತಮ್ಮ ಕಕ್ಷಿದಾರರು ಉಚ್ಚ ನ್ಯಾಯಾಲಯದ ಅನುಮತಿಯೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದರು. ಆದಾಗ್ಯೂ, ಅವರ ವಿರುದ್ಧ ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ ಪ್ರಕರಣವನ್ನು ದಾಖಲಿಸಿತ್ತು. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಯಿತು ಎಂದು ನ್ಯಾಯಾಲಯದ ಗಮನ ಸೆಳೆದರು.

2008ರಲ್ಲಿ ಷರೀಫ್ ವಿರುದ್ಧ ತೋಷಖಾನಾ ಪ್ರಕರಣ ದಾಖಲಾಗಿತ್ತು. ತೋಷಖಾನಾ ಒಂದು ನಿಧಿ ಮನೆಯಾಗಿದ್ದು, ವಿದೇಶಿ ಗಣ್ಯರಿಂದ ಸ್ವೀಕರಿಸಿದ ಉಡುಗೊರೆಗಳನ್ನು ಸಂಗ್ರಹಿಸಲಾಗುತ್ತದೆ. ಯಾವುದೇ ದೇಶದಿಂದ ಮುಖ್ಯಸ್ಥರಿಗೆ ಉಡುಗೊರೆಯಾಗಿ ಮತ್ತು ತೋಷಖಾನಾದಲ್ಲಿ ಠೇವಣಿ ಇಟ್ಟರೆ ಅದು ಬಹಿರಂಗ ಹರಾಜಿನಲ್ಲಿ ಮಾರಾಟವಾಗದ ಹೊರತು ಸರ್ಕಾರದ ಆಸ್ತಿಯಾಗಿ ಉಳಿಯುತ್ತದೆ.

ವರದಿಗಳ ಪ್ರಕಾರ, ತೋಷಖಾನಾದಿಂದ ಕಾರಿನ ಬೆಲೆಯ ಕೇವಲ ಶೇ.15ರಷ್ಟು ಪಾವತಿಸಿ ಅದನ್ನು ಪಡೆದುಕೊಂಡಿದ್ದರು ಎಂಬ ಆರೋಪ ಷರೀಫ್ ವಿರುದ್ಧ ಇದೆ. ಷರೀಫ್ 2008ರಲ್ಲಿ ಯಾವುದೇ ಸಾರ್ವಜನಿಕ ಹುದ್ದೆ ಹೊಂದಿರಲಿಲ್ಲ. ಆದರೂ, ಅವರಿಗೆ ಯಾವುದೇ ಸಕಾರಣವಿಲ್ಲದೆ ಕಾರು ನೀಡಲಾಗಿತ್ತು.

ಮೂರು ಬಾರಿ ಪ್ರಧಾನಿಯಯಾಗಿದ್ದ ನವಾಜ್ ಷರೀಫ್‌ 2020ರಲ್ಲಿ ತೋಷಖಾನಾ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ನಂತರ, 1,650ಕ್ಕೂ ಹೆಚ್ಚು ಕಾಲುವೆಗಳ (200 ಎಕರೆಗಿಂತ ಹೆಚ್ಚು) ಕೃಷಿ ಭೂಮಿ, ಮರ್ಸಿಡಿಸ್ ಬೆಂಜ್ ಕಾರು, ಲ್ಯಾಂಡ್​ ಕ್ರೂಸರ್ ಮತ್ತು ಇತರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತೋಷಖಾನಾ ಪ್ರಕರಣದಲ್ಲಿ ಅವರ ಬಂಧನ ವಾರಂಟ್​ ಅನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಅಮಾನತುಗೊಳಿಸಿದೆ ಎಂದು ವರದಿಗಳು ಹೇಳುತ್ತವೆ.

ಇದನ್ನೂ ಓದಿ:4 ವರ್ಷಗಳ ಗಡೀಪಾರು ಶಿಕ್ಷೆ ಬಳಿಕ ಪಾಕಿಸ್ತಾನಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್​

ABOUT THE AUTHOR

...view details