ನವದೆಹಲಿ:ಹಮಾಸ್ -ಇಸ್ರೇಲ್ ಯುದ್ಧದ ನಡುವೆಯೇ ಇರಾನ್ ತನ್ನ ಸೇನಾ ಬತ್ತಳಿಕೆಗೆ 1400 ಕಿಮೀ ದೂರ ನುಗ್ಗಿ ಶತ್ರು ಭೇದಿಸಬಲ್ಲ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ (ಎಚ್ಸಿಎಂ)ಯನ್ನು ಸೇರಿಸಿಕೊಂಡಿದೆ. ಇದು ಇಸ್ರೇಲ್ ಮೇಲಿನ ದಾಳಿಗೆ ಬಳಸಲಾಗುತ್ತದೆಯೇ ಎಂಬ ಅನುಮಾನ ಮೂಡಿಸಿದೆ.
ಕ್ಷಿಪಣಿ ಸರಣಿಯ ಹೊಸ ಆವೃತ್ತಿಗೆ ಫತ್ತಾಹ್-II ಎಂದು ಹೆಸರಿಸಲಾಗಿದೆ. ಇದನ್ನು ಇರಾನ್ ಸ್ವದೇಶಿ ನಿರ್ಮಿಯ ಕ್ಷಿಪಣಿ ಎಂದು ಹೇಳಿದೆ. ಆದರೆ, ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಆ ದೇಶ ಸೃಜಿಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ತಂತ್ರಜ್ಞಾನವನ್ನ ಅದು ಮಿತ್ರ ರಾಷ್ಟ್ರಗಳಿಂದ ಎರವಲು ಪಡೆದಿರುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗಿದೆ.
ಇರಾನ್ನ ಅಶುರಾ ಏರೋಸ್ಪೇಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರದರ್ಶನದಲ್ಲಿ ಈ ಕ್ಷಿಪಣಿಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಫತ್ತಾಹ್ II ಗ್ಲೈಡ್ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಕ್ಷಿಪಣಿ ಎಂದು ಇರಾನ್ ಹೇಳಿಕೊಂಡಿದೆ. ಇದು ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳಾದ ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ ಮತ್ತು ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ವರ್ಗಗಳಿಗೆ ಸೇರಿದ್ದಾಗಿದೆ.
ಈ ಹೈಪರ್ಸಾನಿಕ್ ಕ್ಷಿಪಣಿ ತಯಾರಿಸುವ ಸಾಮರ್ಥ್ಯ ಇರುವ ಅಮೆರಿಕ, ಚೀನಾ ಸೇರಿದಂತೆ ವಿಶ್ವದ ನಾಲ್ಕು ರಾಷ್ಟ್ರಗಳ ಸಾಲಿಗೆ ಇರಾನ್ ಕೂಡ ಈಗ ಸೇರಿದೆ. ಇರಾನ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC) ಏರೋಸ್ಪೇಸ್ ಫೋರ್ಸ್ ಈ ವರ್ಷದ ಆರಂಭದಲ್ಲಿ ಕ್ಷಿಪಣಿಯನ್ನು ಸ್ವದೇಶಿ ನಿರ್ಮಿತ ಹೇಳಿಕೊಂಡಿದೆ. ಹೈಪರ್ಸಾನಿಕ್ ಕ್ಷಿಪಣಿಯು 1,400 ಕಿಮೀ ವ್ಯಾಪ್ತಿವರೆಗೂ ಸಾಗುವ ಸಾಮರ್ಥ್ಯ ಹೊಂದಿದೆ. ಇದು ಕ್ಷಿಪಣಿ ವಿರೋಧಿ ಶೀಲ್ಡ್ಗಳನ್ನು ಹೊಂದಿದೆ ಎಂದು ಐಆರ್ಜಿಸಿ ಹೇಳಿದೆ.
ತಂತ್ರಜ್ಞಾನ ಕದಿಯಿತೇ ಇರಾನ್?:ಅಮೆರಿಕ, ಚೀನಾ ದೇಶಗಳು ಮಾತ್ರ ಇಂತಹ ಪ್ರಬಲ ಕ್ಷಿಪಣಿಗಳನ್ನು ಹೊಂದಿವೆ. ಈಗ ಇರಾನ್ ಈ ತಂತ್ರಜ್ಞಾನವನ್ನು ಬಳಸಿ ಕ್ಷಿಪಣಿ ತಯಾರಿಸಿದ್ದು, ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಇರಾನ್, ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ನ ಸದಸ್ಯ ರಾಷ್ಟ್ರವಾಗಿಲ್ಲ. ಇದು ಕ್ಷಿಪಣಿಗಳು ಮತ್ತು ಕ್ಷಿಪಣಿ ತಂತ್ರಜ್ಞಾನದ ಪ್ರಸರಣದ ಮೇಲೆ ಹಿಡಿತ ಹೊಂದಿದೆ. ಭಾರತ ಸೇರಿದಂತೆ 35 ಸದಸ್ಯ ರಾಷ್ಟ್ರಗಳು ಈ ಒಪ್ಪಂದದ ಭಾಗವಾಗಿವೆ. 500 ಕಿಮೀ ಸಾಗುವ ಪೆಲೋಡ್ಗಿಂತ ಹೆಚ್ಚಿನ ಕ್ಷಿಪಣಿಗಳ ತಯಾರಿಕೆ ಮತ್ತು ಪೂರೈಕೆಯನ್ನು ಇದು ತಡೆಗಟ್ಟುತ್ತದೆ.
ಇರಾನ್ ಈವರೆಗೂ 300 ಕಿಲೋಮೀಟರ್ಗಿಂತಲೂ ಹೆಚ್ಚು ವ್ಯಾಪ್ತಿಯನ್ನು ದಾಟುವ ಕ್ಷಿಪಣಿಗಳನ್ನು ಹೊಂದಿರಲಿಲ್ಲ. ಇದೀಗ 1400 ಕಿಮೀ ಸಾಗುವ ಕ್ಷಿಪಣಿ ಹೊಂದಿದ್ದು, ಇರಾನ್ ಈ ತಂತ್ರಜ್ಞಾನವನ್ನು ಮಿತ್ರರಾಷ್ಟ್ರಗಳಿಂದ ಪಡೆದುಕೊಂಡಿದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ:Wi-Fiಗೆ ಪರ್ಯಾಯ Li-Fi ತಂತ್ರಜ್ಞಾನ ಕಂಡುಹಿಡಿದ ಒಡಿಯಾ ವಿದ್ಯಾರ್ಥಿ