ನುರ್ಡಗಿ (ಟರ್ಕಿ):ಭೀಕರ ಭೂಕಂಪನಕ್ಕೆ ನಲುಗಿರುವ ಟರ್ಕಿ, ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಭಾರತ 7 ವಿಮಾನಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ನೀಡಿ ಕಷ್ಟಕಾಲದಲ್ಲಿ ಔದಾರ್ಯ ಮೆರೆದಿದೆ. ನೂರಕ್ಕೂ ಅಧಿಕ ಎನ್ಡಿಆರ್ಎಫ್ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ ಜನರ ರಕ್ಷಣೆ ಮಾಡುತ್ತಿದೆ. ಪಡೆಯೊಂದಿಗೆ ಟರ್ಕಿಗೆ ತೆರಳಿರುವ ಶ್ವಾನದಳದ ರೋಮಿಯೋ ಮತ್ತು ಜೂಲಿ 6 ವರ್ಷದ ಬಾಲಕಿಯನ್ನು ಅಚ್ಚರಿಯ ರೀತಿಯಲ್ಲಿ ಕಾಪಾಡಿವೆ.
ಕಂಪನಕ್ಕೆ ತತ್ತರಿಸಿರುವ ನುರ್ಡಗಿ ಎಂಬಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ. ದೊಡ್ಡ ಕಟ್ಟಡದಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ಪತ್ತೆ ಮಾಡಲು ಸಿಬ್ಬಂದಿ ವಿಫಲವಾಗಿತ್ತು. ಆದರೆ, ಅವಶೇಷಗಳಡಿ ಇದ್ದ ಬಾಲಕಿಯನ್ನು ಶ್ವಾನದಳದ ರೋಮಿಯೋ ಮತ್ತು ಜೂಲಿ ಪತ್ತೆ ಮಾಡಿವೆ. ಇವು ನೀಡಿದ ಗುರುತಿನ ಆಧಾರದ ಮೇಲೆ ಎನ್ಡಿಆರ್ಎಫ್ ಪಡೆ ಅಗೆದಾಗ ಬಾಲಕಿ ಸಿಕ್ಕಿದ್ದು ಜೀವಂತವಾಗಿ ರಕ್ಷಿಸಲಾಗಿದೆ.
ಅವಶೇಷಗಳಡಿಯಿಂದ ರಕ್ಷಿಸಲಾದ ಬಾಲಕಿಯನ್ನು ಬೆರೆನ್ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ರಕ್ಷಣೆ ಮಾಡಿದ್ದನ್ನು ಸಿಬ್ಬಂದಿ ಕುಂದನ್ ಹೇಳುವಂತೆ, ನುರ್ಡಗಿ ಪ್ರದೇಶದಲ್ಲಿ ಅವಶೇಷಗಳಡಿ ಜನರು ಸಿಲುಕಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅಲ್ಲಿನ ಸರ್ಕಾರ ಕೋರಿತು. ಅದರಂತೆ ಕಾರ್ಯಪ್ರವೃತ್ತರಾದ ನಮ್ಮ ಪಡೆ ಶೋಧ ನಡೆಸುತ್ತಿತ್ತು. ಈ ವೇಳೆ ತೀಕ್ಷ್ಣಮತಿಯಾದ ಜೂಲಿಯನ್ನು ಅವಶೇಷಗಳಡಿ ಕರೆದೊಯ್ದಾಗ ಕಟ್ಟಡದಡಿ ಮನುಷ್ಯರು ಸಿಲುಕಿದ್ದನ್ನು ಗುರುತಿಸಿದ ಅದು ಬೊಗಳಲು ಶುರು ಮಾಡಿತು.
ಜೀವಂತವಾಗಿ ಬಾಲಕಿಯ ರಕ್ಷಣೆ:ಇದನ್ನು ದೃಢಪಡಿಸಲು ರೋಮಿಯೋನನ್ನು ಕರೆತಂದು ಪರಿಶೀಲಿಸಿದಾಗ ಅದು ಕೂಡ ಬೊಗಳಿತು. ಆಗ ಅವಶೇಷಗಳಡಿ ಯಾರೋ ಇದ್ದಿದ್ದು ತಿಳಿದು ತಕ್ಷಣವೇ ಯಂತ್ರಗಳಿಂದ ಕತ್ತರಿಸಿದಾಗ ಅದರಡಿ ಬಾಲಕಿ ಇರುವುದು ಕಂಡು ಬಂತು. 6 ವರ್ಷದ ಬೆರೆನ್‌ಳನ್ನು ಜೀವಂತವಾಗಿ ಹೊರಕ್ಕೆ ತರಲಾಯಿತು.