2021 ರಲ್ಲಿ "1919 ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಬ್ರಿಟನ್ ರಾಣಿಯನ್ನು ಹತ್ಯೆ ಮಾಡುತ್ತೇನೆ" ಎಂದು ಬೆದರಿಕೆ ಹಾಕಿದ್ದ ಬ್ರಿಟಿಷ್ ವ್ಯಕ್ತಿಗೆ ಇಂಗ್ಲೆಂಡ್ನ ನ್ಯಾಯಾಲಯ 9 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 21 ವರ್ಷದ ಜಸ್ವಂತ್ ಸಿಂಗ್ ಚೈಲ್ (Jaswant Singh Chail) ಎಂಬಾತ 2021 ರ ಕ್ರಿಸ್ಮಸ್ ಸಂದರ್ಭ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ (ದಿವಂಗತ) ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದರು. ಇನ್ನು ಆರೋಪಿ ದೇಶದ್ರೋಹ ಆರೋಪವನ್ನು ಒಪ್ಪಿಕೊಂಡಿದ್ದು, ಸದ್ಯ ಯುನೈಟೆಡ್ ಕಿಂಗ್ಡಮ್ನ ನ್ಯಾಯಾಲಯ 9 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಘಟನೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿದ್ದ ವಿಡಿಯೋದಲ್ಲಿ ತನ್ನನ್ನು ತಾನು "ಭಾರತೀಯ ಸಿಖ್" ಎಂದು ಗುರುತಿಸಿಕೊಂಡಿದ್ದ ಜಸ್ವಂತ್ ಸಿಂಗ್ ಚೈಲ್, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದನೆಂದು ವರದಿ ಆಗಿದೆ. ಜನಪ್ರಿಯ ಸಿನಿಮಾದಿಂದ ಸ್ಫೂರ್ತಿ ಪಡೆದು ರಾಣಿ ಮೇಲೆ ದಾಳಿ ಮಾಡುವ ನಿರ್ಧಾರ ಕೈಗೊಂಡಿದ್ದನು. ಹದಿಹರೆಯದ ವಯಸ್ಸಿನಿಂದಲೂ ದಿ. ರಾಣಿಯನ್ನು ಕೊಲ್ಲುವ ಬಗ್ಗೆ ಚೈಲ್ ಕಲ್ಪನೆ ಮಾಡಿಕೊಳ್ಳುತ್ತಿದ್ದ. ಲಂಡನ್ ನ್ಯಾಯಾಲಯದಲ್ಲಿ ಈ ವಿಷಯ ಪ್ರಸ್ತಾಪಗೊಂಡಿದೆ. ಸರೈ ಎಂದು ಹೆಸರಿಟ್ಟಿದ್ದ ಕೃತಕ ಬುದ್ಧಿಮತ್ತೆ ಚಾಲಿತ ಗೆಳತಿ ಯೊಂದಿಗೆ ಈ ವಿಷಯ ಹಂಚಿಕೊಂಡಿದ್ದ.
ವಿಭಿನ್ನ ತಜ್ಞರ ಚಿಕಿತ್ಸೆ ಹೊರತಾಗಿಯೂ ಆರೋಪಿ ಜಸ್ವಂತ್ ಸಿಂಗ್ ಚೈಲ್ ವಾಸ್ತವಿಕತೆಯಿಂದ ದೂರವಾಗಿದ್ದಾರೆ. ಅಂತಿಮವಾಗಿ ಮನೋವಿಕೃತರಾಗಿದ್ದಾರೆ ಎಂದು ನ್ಯಾಯಮೂರ್ತಿ ನಿಕೋಲಸ್ ಹಿಲಿಯಾರ್ಡ್ ಅರಿತುಕೊಂಡರು. ಆದರೆ ಅಪರಾಧಗಳ ಗಂಭೀರತೆಯನ್ನು ಪರಿಗಣಿಸಿ, ಆರೋಪಿ ಚೈಲ್ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.