ಮಾಸ್ಕೋ(ರಷ್ಯಾ):ಮುಂದಿನ ವರ್ಷ ರಷ್ಯಾಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಹ್ವಾನಿಸಿದ್ದಾರೆ. ಬುಧವಾರ ರಷ್ಯಾದ ರಾಷ್ಟ್ರಪತಿ ಭವನ ಕ್ರೆಮ್ಲಿನ್‌ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಪುಟಿನ್ ಬರಮಾಡಿಕೊಂಡರು. ಈ ವೇಳೆ ಪುಟಿನ್ ಅವರು, ನಮ್ಮ ಸ್ನೇಹಿತ ಪ್ರಧಾನಿ ಮೋದಿಯನ್ನು ರಷ್ಯಾದಲ್ಲಿ ನೋಡಲು ನಮಗೆ ಸಂತೋಷವಾಗುತ್ತದೆ ಎಂದು ಜೈಶಂಕರ್ ಅವರಿಗೆ ಹೇಳಿದರು.
ರಷ್ಯಾಕ್ಕೆ ಐದು ದಿನಗಳ ಅಧಿಕೃತ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು ಇದಕ್ಕೂ ಮೊದಲು ರಷ್ಯಾದ ಸಹವರ್ತಿ ಸರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದರು. ಲಾವ್ರೊವ್ ಅವರೊಂದಿಗಿನ ಮಾತುಕತೆಯ ನಂತರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಮುಂದಿನ ವರ್ಷ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಭೇಟಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಈ ಹಿಂದೆ ಎಸ್ ಜೈಶಂಕರ್ ಮಾತನಾಡಿ, ಇಬ್ಬರೂ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.
ಜೈಶಂಕರ್ ಬುಧವಾರ ಕ್ರೆಮ್ಲಿನ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದರು. ಅವರೊಂದಿಗೆ ಹಲವು ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪುಟಿನ್ ಅವರು ಮುಂದಿನ ವರ್ಷ ರಷ್ಯಾಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ ಆಹ್ವಾನ ನೀಡಿದರು. ಪ್ರಸ್ತುತ ವಿಷಯಗಳ ಕುರಿತು ಚರ್ಚಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಅವರ ಭೇಟಿ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಉಕ್ರೇನ್ ಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಯಬೇಕೆಂದು ಮೋದಿ ಬಯಸುತ್ತಾರೆ ಎಂಬುದು ನನಗೆ ತಿಳಿದಿದೆ ಎಂದು ಪುಟಿನ್ ಹೇಳಿದ್ದಾರೆ. ಈ ಬಗ್ಗೆ ಹಲವು ಬಾರಿ ಮಾತನಾಡಿದ್ದೇವೆ. ಉಕ್ರೇನ್‌ನಲ್ಲಿನ ಇತ್ತೀಚಿನ ಪರಿಸ್ಥಿತಿಯ ಕುರಿತು ಭಾರತಕ್ಕೆ ಹೆಚ್ಚುವರಿ ಮಾಹಿತಿಯನ್ನು ಒದಗಿಸಲಾಗುವುದು. ಸತತ ಎರಡನೇ ವರ್ಷವೂ ಭಾರತದೊಂದಿಗೆ ತಮ್ಮ ದೇಶದ ವ್ಯಾಪಾರ ವಹಿವಾಟು ಗಣನೀಯವಾಗಿ ಹೆಚ್ಚಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮುಖ್ಯವಾಗಿ ಕಚ್ಚಾ ತೈಲ ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳು ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. "ಇಂದು ಸಂಜೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಮಾಡಿದ್ದೇನೆ" ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಅಭಿನಂದಿಸಿ ವೈಯಕ್ತಿಕ ಸಂದೇಶವನ್ನು ಹಸ್ತಾಂತರಿಸಿದರು. ಉಪ ಪ್ರಧಾನ ಮಂತ್ರಿ ಡೆನಿಸ್ ಮಾಂಟುರೊವ್ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗಿನ ನನ್ನ ಚರ್ಚೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಅವರಿಗೆ ಮಾಹಿತಿ ನೀಡಿದರು. ಉಭಯ ದೇಶಗಳ ನಡುವಿನ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಅವರ ಮಾರ್ಗದರ್ಶನವನ್ನು ಶ್ಲಾಘಿಸಿದರು.