ಜೆರುಸಲೇಂ:ಹಮಾಸ್, ಐಸಿಸ್ ಮಾದರಿಯಲ್ಲಿ ಕ್ರೂರವಾಗಿ ನಡೆದುಕೊಳ್ಳುತ್ತಿದೆ. ಮಕ್ಕಳನ್ನೂ ಬಿಡದೇ ಬರ್ಬರವಾಗಿ ಹತ್ಯೆ ಮಾಡುತ್ತಿದೆ. ಮುಂದಿನ ದಿನಗಳು ಶೋಚನೀಯವಾಗಿರಲಿವೆ. ಐಸಿಸ್ನಂತೆಯೇ ಹಮಾಸ್ ಅನ್ನು ದಮನ ಮಾಡಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಜೊತೆಗೆ ಹಮಾಸ್ ನಡೆಸಿದೆ ಎನ್ನಲಾದ ಭಯಾನಕ ಹತ್ಯಾಕಾಂಡದ ಕೆಲ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಗುರುವಾರ ಇಸ್ರೇಲ್‌ಗೆ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಜೊತೆಗಿನ ಮಾತುಕತೆಯ ವೇಳೆ ಹಮಾಸ್ ಉಗ್ರರ ರಕ್ಕಸತನದ ಬಗ್ಗೆ ವಿವರಿಸಿದ ನೆತನ್ಯಾಹು, ಹಮಾಸ್ ಉಗ್ರರನ್ನು ಐಸಿಸ್ ರೀತಿಯಲ್ಲಿಯೇ ಹತ್ತಿಕ್ಕಲಾಗುವುದು. ಐಸಿಸ್ ಅನ್ನು ನಡೆಸಿಕೊಂಡ ರೀತಿಯಲ್ಲಿಯೇ ಅದನ್ನು ಸರ್ವನಾಶ ಮಾಡಲಾಗುವುದು ಎಂದು ಗುಡುಗಿದರು.
ಎಕ್ಸ್ನಲ್ಲಿ ಭಯಾನಕ ವಿಡಿಯೋ ಪೋಸ್ಟ್:ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು, ಇಸ್ರೇಲಿಗರನ್ನು ಸುಟ್ಟು ಹಾಕಿದ, ಶಿಶುಗಳ ಹತ್ಯೆಯಂತಹ ರಕ್ತಸಿಕ್ತ, ಭಯಾನಕ ಚಿತ್ರಗಳನ್ನು ಪ್ರಧಾನಿ ನೆತನ್ಯಾಹು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಮಾಸ್ ರಾಕ್ಷಸೀ ಕೃತ್ಯ ನಡೆಸುತ್ತಿದೆ. ಶಿಶುಗಳನ್ನೂ ಸುಟ್ಟು ಹಾಕಿದೆ. ಐಸಿಸ್‌ನಂತೆ ವರ್ತಿಸುತ್ತಿರುವ ಉಗ್ರರನ್ನು ನಾಮಾವಶೇಷ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.
ಆ್ಯಪ್ಗಳನ್ನು ಡಿಲಿಟ್ ಮಾಡಿ:ಇಸ್ರೇಲ್ ಸರ್ಕಾರ ಇಂತಹ ವಿಡಿಯೋಗಳು ನಿಮ್ಮ ಮಕ್ಕಳ ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶೀಘ್ರವೇ ಇನ್ಸ್ಟಾಗ್ರಾಮ್, ಟಿಕ್ಟಾಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳ ಆ್ಯಪ್ ಅಳಿಸಿ ಹಾಕಿ ಎಂದು ಕರೆ ನೀಡಿದೆ.
ಇಸ್ರೇಲ್- ಪ್ಯಾಲೆಸ್ಟೀನ್ ಸಂಘರ್ಷ ಮುಂದುವರಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭೀಕರ ವಿಡಿಯೋಗಳು ಹರಿದಾಡುತ್ತಿವೆ. ಹೀಗಾಗಿ ಉಗ್ರಗಾಮಿ ಗುಂಪು ಹಮಾಸ್, ಪೋಸ್ಟ್ ಮಾಡುತ್ತಿರುವ ಇಂತಹ ವಿಡಿಯೋಗಳು ಮಕ್ಕಳ ಮೊಬೈಲ್ ಫೋನ್‌ಗಳಿಗೆ ಬರಲಿದೆ. ತಕ್ಷಣವೇ ಎಲ್ಲ ಸಾಮಾಜಿಕ ಜಾಲತಾಣಗಳನ್ನು ಡಿಲಿಟ್ ಮಾಡಿ ಎಂದು ಶಾಲೆಗಳಿಂದ ಪೋಷಕರಿಗೆ ಎಚ್ಚರಿಕೆ ರವಾನಿಸಲಾಗಿದೆ.