ಸಿಂಗಾಪುರ: ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಭಾರತೀಯ ಮೂಲದ ಹಿರಿಯ ಸಚಿವ ಥರ್ಮನ್ ಷಣ್ಮುಗರತ್ನಂ ಅವರು ತಮ್ಮ ಇಂಗಿತವನ್ನು ಗುರುವಾರ ಪ್ರಕಟಿಸಿದ್ದಾರೆ. 22 ವರ್ಷಗಳ ನಂತರ ಸಕ್ರಿಯ ರಾಜಕೀಯದಿಂದ ದೂರ ಸರಿದು ಈ ವರ್ಷ ಅಧ್ಯಕೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ.
66 ವರ್ಷದ ಥರ್ಮನ್, 1960ರಿಂದ ಸಿಂಗಾಪುರದ ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿ (ಪಿಎಪಿ)ಯ ನಾಯಕರಾಗಿದ್ದಾರೆ. ಇದೀಗ ರಾಜಕೀಯದಿಂದ ನಿವೃತ್ತಿ ಮತ್ತು ಸರ್ಕಾರದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಲು ಅವರು ತೀರ್ಮಾನಿಸಿದ್ದಾರೆ. ಇದೇ ಸೆಪ್ಟೆಂಬರ್ 13ರೊಳಗೆ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಪ್ರಧಾನಿ ಲೀ ಸಿಯೆನ್ ಲೂಂಗ್ ಅವರಿಗೆ ತಿಳಿಸಿದರು.
ಥರ್ಮನ್ ಮೊದಲ ಬಾರಿಗೆ 2001ರಲ್ಲಿ ಜುರಾಂಗ್ ಗ್ರೂಪ್ ಪ್ರಾತಿನಿಧ್ಯ ಕ್ಷೇತ್ರದ (ಜುರಾಂಗ್ ಜಿಆರ್‌ಸಿ) ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಈ ಕ್ಷೇತ್ರವು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಮತ್ತು ಪ್ರಧಾನವಾಗಿ ಚೀನಾ ಮೂಲದ ಜನಸಂಖ್ಯೆಯ ಸದಸ್ಯರ ನೇತೃತ್ವದ ಗುಂಪಿಗೆ ಸೇರಲು ಅನುವು ಮಾಡಿಕೊಡುತ್ತದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಧಾನಿಗೆ ಪತ್ರ ಬರೆದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸಿಂಗಾಪುರದ ಹಣಕಾಸು ಪ್ರಾಧಿಕಾರದ (ಎಂಎಎಸ್) ಅಧ್ಯಕ್ಷ ಸ್ಥಾನ, ಸಿಂಗಾಪುರ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (ಜಿಐಸಿ) ಉಪ ಅಧ್ಯಕ್ಷ ಸ್ಥಾನ, ಆರ್ಥಿಕ ಅಭಿವೃದ್ಧಿ ಮಂಡಳಿಯ ಅಂತಾರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರು ಮತ್ತು ತಮ್ಮ ಸಚಿವ ಸ್ಥಾನದಲ್ಲಿ ನಿರ್ವಹಿಸುತ್ತಿರುವ ಇತರ ಜವಾಬ್ದಾರಿಗಳಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಇತ್ತೀಚಿನ ತಿಂಗಳುಗಳಲ್ಲಿ ತಾನು ಅಧ್ಯಕ್ಷೀಯ ಚುನಾವಣೆಗೆ ನಿಲ್ಲುವುದನ್ನು ನೋಡಲು ಬಯಸುವ ಸಿಂಗಾಪುರಿಗರ ಮಾನವಿಗಳನ್ನು ಸ್ವೀಕರಿಸಿದ್ದೇನೆ. ಇದೇ ವೇಳೆ, ಇದು ಕಠಿಣ ನಿರ್ಧಾರವಾಗಿದೆ. ಮುಂದಿನ ವರ್ಷಗಳಲ್ಲಿ ನಾನು ದೇಶಕ್ಕೆ ಹೇಗೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಬಹುದು ಎಂಬುದರ ಕುರಿತೂ ಎಚ್ಚರಿಕೆಯಿಂದ ಯೋಚಿಸುತ್ತಿದ್ದೇನೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.