ಸೌತ್ ಕ್ಯಾರೊಲಿನಾ( ಅಮೆರಿಕ): ಬಿಳಿ ಮತ್ತು ಕಪ್ಪು ಜಗತ್ತಿನಲ್ಲಿ ಅಮೆರಿಕದ ಭರವಸೆಯಾಗಿ ಬೆಳೆಯಲು ಕಂದು ಬಣ್ಣದ ಹುಡುಗಿಯೊಬ್ಬರು ಎದುರು ನೋಡುತ್ತಿದ್ದಾರೆ ಎಂದು ಭಾರತೀಯ ಮೂಲದ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ. ಅಮೆರಿಕದ ಭರವಸೆ ತನ್ನ ಮುಂದೆಯೇ ಇದೆ ಎಂದು ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗಿರುವ ಹ್ಯಾಲೆ ತಿಳಿಸಿದ್ದಾರೆ.
51 ವರ್ಷದ ಹ್ಯಾಲೆ ದಕ್ಷಿಣ ಕೆರೊಲಿನಾದಲ್ಲಿ ಎರಡು ಅವಧಿಗೆ ಗವರ್ನರ್ ಮತ್ತು ಅಮೆರಿಕದ ವಿಶ್ವಸಂಸ್ಥೆಯ ಮಾಜಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ತಮ್ಮ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಯೋಜನೆಯನ್ನು ನಿಜವಾಗಿಸಬಹುದು ಎಂಬ ದೃಢವಿಶ್ವಾಸ ಎಂದಿಗಿಂತಲೂ ಇಂದು ಹೆಚ್ಚು ಹೊಂದಿದ್ದೇನೆ. ಕಾರಣ ನನ್ನ ಸಂಪೂರ್ಣ ಜೀವನವನ್ನು ನಾನು ನೋಡಿದ್ದೇನೆ. ಕಂದು ಬಣ್ಣದ ಹುಡುಗಿಯಾಗಿ, ಕಪ್ಪು ಮತ್ತು ಬಿಳಿ ಜನರ ನಡುವೆ ಬೆಳಯುತ್ತಿರುವಾಗ, ನನ್ನ ಮುಂದೆ ಅಮೆರಿಕದ ಭರವಸೆಯಾಗಿ ಬೆಳೆಯುವುದನ್ನು ನೋಡಿದೆ ಎಂದರು
2024ರ ಅಮೆರಿಕದ ಅಧ್ಯಕ್ಷ ಚುನಾವಣೆ ಹಿನ್ನೆಲೆ ಹ್ಯಾಲೆ ಅಧಿಕೃತವಾಗಿ ಭಾಷಣ ಶುರು ಮಾಡಿದ್ದಾರೆ. ವಿಶ್ವಸಂಸ್ಥೆಯ ಅನುಭವ ಹೊಂದಿರುವ ಆಕೆ, ಬಾಲ್ಯದಲ್ಲಿಯೇ ಅಮೆರಿಕಕ್ಕೆ ಕಾಲಿಟ್ಟು, ಅಲ್ಲಿಯೇ ಬೆಳೆದವರು ಈ ಹ್ಯಾಲೆ. ಈ ಕುರಿತು ಮಾತನಾಡಿರುವ ಅವರು, ಅಮೆರಿಕದಲ್ಲಿ ಯಾವುದೇ ಜನಾಂಗೀಯ ತಾರತಮ್ಯವಿಲ್ಲ. ನನ್ನನ್ನೇ ತೆಗೆದುಕೊಳ್ಳಿ ಎಂದು ತಮ್ಮ ನಿದರ್ಶನವನ್ನು ಜನರ ಮುಂದೆ ಇಟ್ಟಿದ್ದಾರೆ.
ಸಿಖ್ ದಂಪತಿ ಅಜಿತ್ ಸಿಂಗ್ ರಾಂದವ್ ಮತ್ತು ರಾಜ್ ಕೌರ್ ರಾಂದವ್ ಅವರ ಪುತ್ರಿಯಾಗಿರುವ ಹ್ಯಾಲೆ 1972ರಲ್ಲಿ ದಕ್ಷಿಣ ಕರೊಲಿನಾದ ಬಾಂರ್ಬಗ್ನ ನಿಮರತಾ ನಿಕ್ಕಿ ರಾಂದವ್ ಆಗಿ ಜನಿಸಿದರು. ಈ ದಂಪತಿ 1960ರಲ್ಲೇ ಪಂಜಾಬ್ ನಿಂದ ಕೆನಾಡ ಬಳಿಕ ಅಮೆರಿಕಕ್ಕೆ ಬಂದು ನೆಲೆಸಿದರು. ಸಿಖ್ ಆಗಿ ಬೆಳೆದರು ಬಳಿಕ ಕ್ರಿಶ್ಚಿಯನ್ ಧರ್ಮಕ್ಕೆ ಮಂತಾಂತರಗೊಂಡಿರುವ ಹ್ಯಾಲೆ 1996ರಲ್ಲಿ ಮಿಷೆಲ್ ಹ್ಯಾಲೆ ಅವರನ್ನು ವರಿಸಿದರು.
ಅದು ಅಷ್ಟು ಸುಲಭವಾಗಿರಲಿಲ್ಲ:ಸ್ವಾತಂತ್ರ್ಯ ಮತ್ತು ಶಾಂತಿ ವಿಚಾರದಲ್ಲಿ ಅಮೆರಿಕ ಜಗತ್ತನ್ನು ಮುನ್ನಡೆಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆದರೆ, ಇದು ನನ್ನ ದೃಷ್ಟಿಯಲ್ಲ. ಇದು ನಮ್ಮ ದೇಶದ ಇತಿಹಾಸ. ಇದೇ ಕಾರಣದಿಂದ 50 ವರ್ಷದಿಂದ ನನ್ನ ಪೋಷಕರು ಇಲ್ಲಿ ನೆಲೆಸಿದ್ದಾರೆ. ನಾನು ಭಾರತೀಯ ವಲಸಿಗರ ಹೆಮ್ಮೆಯ ಮಗಳು ಎಂದಿದ್ದಾರೆ ಹ್ಯಾಲೆ. ನನ್ನ ಪೋಷಕರು ಉತ್ತಮ ಜೀವನ ಕಟ್ಟಿಕೊಳ್ಳುವುದಕ್ಕಾಗಿ ಭಾರತವನ್ನು ತೊರೆದರು. 2,500 ಜನಸಂಖ್ಯೆ ದಕ್ಷಿಣ ಕರೊಲಿನಾ ಬೊಬರ್ಗ್ಗೆ ಆಗಮಿಸಿದರು. ಈ ಸಣ್ಣ ನಗರ ನಮಗೆ ಪ್ರೀತಿಯನ್ನು ನೀಡಿತು. ಇದು ಸುಲಭವೂ ಆಗಿರಲಿಲ್ಲ. ಕಾರಣ ಅಲ್ಲಿದ್ದ ಏಕೈಕ ಭಾರತೀಯ ಕುಟುಂಬ ನಮ್ಮದು. ನಾವು ಯಾರು, ಏನು ಮಾಡುತ್ತಿದ್ದೇವೆ ಅಥವಾ ಇಲ್ಲಿ ಯಾಕೆ ಇದ್ದೇವೆ ಎಂಬುದು ಯಾರಿಗೂ ಗೊತ್ತಿರಲಿಲ್ಲ ಎಂದು ತಮ್ಮ ಜೀವನಾನುಭವ ಹಂಚಿಕೊಂಡಿದ್ದಾರೆ.
ಕಳೆದ ವರ್ಷ 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ 76 ವರ್ಷದ ಡೋನಾಲ್ಡ್ ಟ್ರಂಪ್ ಘೋಷಿಸಿದ್ದು, ಇದೀಗ ಅವರಿಗೆ ಮೊದಲ ಸ್ಪರ್ಧಿಯಾಗಿ ಕಣಕ್ಕೆ ಇಳಿಯುತ್ತಿರುವುದಾಗಿ ಹ್ಯಾಲೇ ಘೋಷಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಪ್ರವೇಶ ಪಡೆಯುವ ಮುನ್ನ ಹ್ಯಾಲೆ ಪ್ರಾಥಮಿಕವಾಗಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಗೆಲ್ಲಬೇಕಿದೆ. ಇದು ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದ್ದು, ಅಮೆರಿಕದ ಅಧ್ಯಕ್ಷೀಯ ಚುನಾವಣೆ 2024ರ ನವೆಂಬರ್ 5ರಂದು ನಡೆಯಲಿದೆ.
ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಶೇ 98 ರಷ್ಟು ಹಣದುಬ್ಬರ, ಜನ ಕಂಗಾಲು